ನ್ಯೂಸ್ ನಾಟೌಟ್ : 20 ವರ್ಷಗಳಿಂದ ಶಾಸಕರಾಗಿದ್ದು ಮೊದಲ ಬಾರಿಗೆ ಸೋಲು ಕಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ ವೈಯಕ್ತಿಕ ಸೋಲು ಎಂದು ತಿಳಿಸಿದ್ದಾರೆ. ಏನೇ ಅಂದರೂ ಸೋಲು ಸೋಲೆ ಅಲ್ಲವೆ?
ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ 1999ರ ಬಳಿಕ ಮೊದಲ ಬಾರಿಗೆ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಸೋತಿದೆ. 1999ರಲ್ಲೂ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು ಎನ್ನುವುದು ದಾಖಲೆ.
ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿದ್ದ, ಆರ್ಎಸ್ಎಸ್ ನ ಕಾರ್ಯಕರ್ತನಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ.ರವಿ ಸ್ಪರ್ಧಿಸುತ್ತಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸಿ.ಟಿ.ರವಿ ವಿರುದ್ಧ ಮುನಿಸಿಕೊಂಡು ಆಪ್ತ ಎಚ್.ಡಿ. ತಮಯ್ಯ ಎದುರಾಳಿಯಾಗಿದ್ದು ಕುತೂಹಲಕ್ಕೂ ಕಾರಣವಾಗಿತ್ತು. ಈ ಕುತೂಹಲಕ್ಕೆ ಸಿಟಿ ರವಿ ಸೋಲು ಉತ್ತರವಾಗಿ ದೊರಕಿದೆ.
1. ಚಿಕ್ಕಮಗಳೂರಿನಲ್ಲಿ ಪಕ್ಷ ವಿರೋಧಿಗಳು ಹೆಚ್ಚಾದರಿಂದ ಸಿ.ಟಿ. ರವಿ ಈ ಬಾರಿ ಸೋಲು ಅನುಭವಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಈ ಬಾರಿ ಸಿ.ಟಿ.ರವಿ ವಿರುದ್ಧ ಅವರ ಆಪ್ತನಾಗಿದ್ದ ಎಚ್.ಡಿ. ತಮಯ್ಯ ಅಸಮಾಧಾನಗೊಂಡು ಎದುರಾಳಿಯಾಗಿ ನಿಂತು ಗೆದ್ದಿದ್ದಾರೆ.
2. ಸಿಪಿಐ ಅಂದರೆ ಕಮ್ಯುನಿಷ್ಟ್ ಪಕ್ಷ ಚಿಕ್ಕಮಗಳೂರಿನಲ್ಲಿ ಉತ್ತಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಮಾತ್ರವಲ್ಲದೆ ಕಾಂಗ್ರೆಸ್ ಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಿತ್ತು ಎನ್ನಲಾಗಿದೆ. ಕಾಂಗ್ರೆಸ್ನ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಜಾತಿಯ ಬಲ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮೂರು ತಿಂಗಳಲ್ಲಿ ಟಿಕೆಟ್ ಪಡೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿನ ಒಡಕು ನಿವಾರಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದು, ಜೆಡಿಎಸ್ ಮುಖಂಡರು ಕಾಂಗ್ರೆಸ್ ಬೆಂಬಲಕ್ಕೆ ನಿಂತದ್ದು, ತಮ್ಮಯ್ಯ ಗೆಲುವಿಗೆ ಕಾರಣವಾಗಿದೆ ಎನ್ನಲಾಗಿದೆ.
3. ಎಸ್ಡಿಪಿಐ ಅಭ್ಯರ್ಥಿ ಕಣಕ್ಕಿಳಿಸದಿದ್ದದ್ದು ಸಿಟಿ ರವಿ ಅವರರಿಗೆ ಮುಳುವಾಗಿದೆ ಎನ್ನಲಾಗಿದ್ದು, ಇಲ್ಲವಾದರೆ ಕಾಂಗ್ರೆಸ್ ಗೆ ಬಂದ ಹಲವು ಓಟ್ ಗಳು ಎಸ್ಡಿಪಿಐ ಪಾಲಾಗುತ್ತಿತ್ತು.
4. ವಿಪಕ್ಷಗಳ ನಾಯಕರ ವಿರುದ್ಧ ಅವಹೇಳನ ಪದ ಬಳಕೆ ಮತ್ತು ಅನವಶ್ಯಕ ವಾಗ್ದಾಳಿಗಳು ಉದಾಹರಣೆಗೆ ಸಿದ್ರಾಮುಲ್ಲಾ ಖಾನ್, ಕಚ್ಚೆಹರುಕ ಎಂದು ಸಿದ್ದರಾಮಯ್ಯಗೆ ಹೇಳಿದ್ದು , ಸಾಬರಾಗಿ ಹುಟ್ಟಲು ತಡೆ ಏಕೆ ಈಗಲೇ ಹೋಗಿ ಎಂದು ಎಚ್.ಡಿ.ದೇವೇಗೌಡ ಅವರಿಗೆ ಹೇಳಿದ್ದು ಹಾಗೂ ಹಲಾಲ್ ಹಿಜಾಬ್ ಕುರಿತ ಹೇಳಿಕೆಗಳು ಜನರ ವಿರೋಧಕ್ಕೆ ಮತ್ತು ಕಾಂಗ್ರೆಸ್ ಮೇಲಿನ ಅನುಕಂಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದ ಅಧಿಕಾರಕ್ಕೆ ಏರುತ್ತಿದ್ದಂತೆ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟ ಪರಿಣಾಮ ಸಮುದಾಯಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಸಿ.ಟಿ.ರವಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
5. ಬಿಜೆಪಿ ಕುರಿತ ಆಡಳಿತ ವಿರೋಧಿ ಅಲೆ ಮತ್ತು ಪಕ್ಷದೊಳಗಿನ ವಿರೋಧವೂ ಸೋಲಿಗೆ ಕಾರಣ ಎನ್ನಲಾಗಿದೆ.
6. ಜನರ ಸಂಪರ್ಕದಿಂದ ದೂರವಾದದ್ದು, ಅಂದರೆ ಸಿಟಿ ರವಿ ರಾಷ್ಟ್ರ ರಾಜಕಾರಣದ ಮೇಲೆ ಹೆಚ್ಚು ಒಲವು ತೋರಿ ತಮ್ಮ ಕ್ಷೇತ್ರದ ಜನರಿಂದ ದೂರವಾಗಿದ್ದರು ಮತ್ತು ಅವಶ್ಯಕತೆಗೂ ಸಿಗುತ್ತಿರಲಿಲ್ಲ ಎನ್ನುವ ಆರೋಪಗಳಿವೆ. ಜೊತೆಗೆ ಜಿಲ್ಲೆಯ ಜನರ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದರು ಎನ್ನಲಾಗಿದ್ದು – ಉದಾಹರಣೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ ಇತ್ತು ಅದರ ಬಗ್ಗೆ ಗಮನ ನೀಡದೆ ಅಸಡ್ಡೆ ತೋರಿದ್ದರು ಎನ್ನಲಾಗಿದೆ.
7. 20ವರ್ಷ ಶಾಸಕರಾಗಿದ್ದ ಸಿ.ಟಿ.ರವಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಸಾಧಿಸಿದ್ದರಿಂದ ಇದು ಜನಾಕ್ರೋಶಕ್ಕೆ ಕಾರಣವಾಗಿತ್ತು. 20 ವರ್ಷದಲ್ಲಿ ಸಿ.ಟಿ.ರವಿ ತಮ್ಮ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಬೆಳೆಸಲಿಲ್ಲ. ಕಾರ್ಯಕರ್ತರು ಸಣ್ಣಪುಟ್ಟ ಹುದ್ದೆಗಳಿಗಷ್ಟೇ ಸೀಮಿತವಾಗಿರುವಂತೆ ಸಿಟಿ ರವಿ ನೋಡಿಕೊಂಡಿದ್ದರು ಎನ್ನಲಾಗಿದೆ.
8. ಸಂಬಂಧಿಯೊಬ್ಬರು ಸರ್ಕಾರಿ ಗುತ್ತಿಗೆ ಪಡೆದುಕೊಳ್ಳುತ್ತಿದ್ದ ಆರೋಪವೂ ಸಿ.ಟಿ.ರವಿ ಅವರಿಗೆ ವಿರೋಧವಾಗಿ ಪರಿಣಮಿಸಿತ್ತು ಎನ್ನಲಾಗಿದೆ.
ಇದೆಲ್ಲದರ ಪರಿಣಾಮವಾಗಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 20 ವರ್ಷಗಳ ನಂತರ ಹೊಸ ಮುಖವಾದ ಎಚ್.ಡಿ.ತಮ್ಮಯ್ಯ ಕಾಂಗ್ರೆಸ್ ನಿಂದ ವಿಧಾನಸೌಧದ ಮೆಟ್ಟಿಲು ಏರಲು ಸಾಧ್ಯವಾಯಿತು. ಜೊತೆಗೆ ಹಿಂದುತ್ವವಾದಿ ಸಿಟಿ ರವಿ ಅವರ ಸೋಲಿಗೆ ಕಾರಣವಾಗಿವೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.