ನ್ಯೂಸ್ ನಾಟೌಟ್: ಸಿನಿಮಾ ತಾರೆಯರು ರಾಜಕೀಯ ಜೀವನಕ್ಕೆ ಪ್ರವೇಶಿಸುವುದನ್ನು ನೋಡಿದ್ದೇವೆ. ಈಗ ಈ ಸಾಲಿಗೆ ಕ್ರಿಕೆಟ್ ತಾರೆಯರೂ ಸೇರಿಕೊಳ್ಳುತ್ತಿದ್ದಾರೆ.
ಹೌದು, ಐಪಿಎಲ್ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಇದೀಗ ರಾಜಕೀಯ ಜೀವನಕ್ಕೆ ಪ್ರವೇಶಿಸುತ್ತಿದ್ದಾರೆ ಅನ್ನುವ ಸುದ್ದಿಗಳು ವೈರಲ್ ಆಗಿದೆ. ಕೆಲದಿನಗಳ ಹಿಂದಷ್ಟೇ ಅಂಬಟಿ ರಾಯುಡು, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗಮೋಹನ್ ರೆಡ್ಡಿ ಅವರನ್ನು ಟ್ವೀಟ್ವೊಂದರಲ್ಲಿ ಕೊಂಡಾಡಿದ್ದರು. ಕಳೆದ ಬುಧವಾರ ಶ್ರೀಕಕುಲಂ ಜಿಲ್ಲೆಯ ನೌಪದಾ ಸಭಾದಲ್ಲಿ ಆಂಧ್ರ ಮುಖ್ಯಮಂತ್ರಿ ಮಾಡಿದ ಭಾಷಣವನ್ನು ರಾಯುಡು ಗುಣಗಾನ ಮಾಡಿದ್ದರು. “ನಮ್ಮ ಮುಖ್ಯಮಂತ್ರಿ ಜಗನ್ ಅವರ ಮಾತುಗಳು ಅದ್ಭುತವಾಗಿದ್ದವು. ರಾಜ್ಯದ ಪ್ರತಿಯೊಬ್ಬರು ನಿಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆಯಿಟ್ಟಿದ್ದಾರೆ ಸರ್ ಎಂದು ರಾಯುಡು ಟ್ವೀಟ್ ಮಾಡಿದ್ದರು. ಅವಕಾಶ ಸಿಕ್ಕರೇ ರಾಜಕೀಯ ಪಕ್ಷವನ್ನು ಸೇರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ರಾಯುಡು ತಿಳಿಸಿದ್ದರು. ಇದೀಗ ರಾಯುಡು 16ನೇ ಆವೃತ್ತಿಯ ಐಪಿಎಲ್ ಬಳಿಕ ಜಗನ್ಮೋಹನ್ ರೆಡ್ಡಿ ನೇತೃತ್ವದ YSRCP ಪಕ್ಷ ಸೇರುವ ಸಾಧ್ಯತೆಯಿದೆ.
ರಾಯುಡು 2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ 2017ರವರೆಗೂ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ರಾಯುಡು, ಮೂರು ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಇದಾದ ಬಳೀಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡ ರಾಯುಡು, ಚೆನ್ನೈ ತಂಡವು ಎರಡು ಬಾರಿ ಕಪ್ ಗೆಲ್ಲಲು ಮಹತ್ತರ ಪಾತ್ರವನ್ನು ವಹಿಸಿದ್ದರು. ಫೈನಲ್ ಪಂದ್ಯ ಹೊರತುಪಡಿಸಿ ಈವರೆಗೆ ಅವರು 203 ಐಪಿಎಲ್ ಪಂದ್ಯಗಳನ್ನಾಡಿದ್ದು, 1 ಶತಕ, 22 ಅರ್ಧಶತಕ ಸೇರಿದಂತೆ 4329 ರನ್ ಕಲೆ ಹಾಕಿದ್ದಾರೆ.