ನ್ಯೂಸ್ ನಾಟೌಟ್:ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಿರುವ ಬೆಂಬಲಿಗರು ಸಾರ್ವಜನಿಕ ಸಭೆ, ವೇದಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದು, ಕೀಳು ಮಟ್ಟದ ಪದ ಪ್ರಯೋಗಿಸುತ್ತಿರುವುದನ್ನು ಮಾಡುತ್ತಿದ್ದಾರೆ. ಈ ಎಲ್ಲ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ ವರ್ತನೆ ಕಾರ್ಕಳದ ಗೌರವ ಕೆಡಿಸುವ ಯತ್ನವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿ ಸುನಿಲ್ಕುಮಾರ್ ಹೇಳಿದ್ದಾರೆ.
ಕಾರ್ಕಳದ ಜನ ಗೌರವದಿಂದ ಬದುಕಿ ಬಾಳಿದವರು ಇಂದಿಗೂ ಅದೇ ಬದುಕನ್ನು ಮುಂದುವರಿಸುತ್ತಿದ್ದಾರೆ. ಮುಂದೆಯೂ ಅದನ್ನೆ ಬಯಸುವರು. ಗೌರವದ ರಾಜಕಾರಣವನ್ನು ಹಿಂದಿನ ಎಲ್ಲ ಚುನಾವಣೆ ಹಾಗೂ ಕಾಲ ಘಟ್ಟದಲ್ಲಿ ನೋಡಿಕೊಂಡು ಬರಲಾಗಿದೆ. ಆದರೀಗ ಕಾಂಗ್ರೆಸ್ ಅಭ್ಯರ್ಥಿ ಪರವಿರುವ ಕೆಲ ಬೆಂಬಲಿಗರು ರಾಜಕೀಯ, ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಸಭೆ ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಂಡು ತೀರಾ ಕೆಳ ಮಟ್ಟಕ್ಕೆ ಇಳಿದು ವೈಯಕ್ತಿಕ ಟೀಕೆ- ಟಿಪ್ಪಣಿಗಳಲ್ಲಿ ತೊಡಗಿದೆ ಎಂದು ಗುಡುಗಿದರು.
ವೈಯಕ್ತಿಕ ವಿಚಾರ ಬಳಸಿಕೊಂಡು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅಭ್ಯರ್ಥಿ ಬೆಂಬಲಿಗರ ಪದ ಬಳಕೆ, ಪ್ರಚೋದನಕಾರಿ ಹೇಳಿಕೆ, ಸಂದೇಶಗಳು ಎಲ್ಲೆ ಮೀರುತ್ತಿವೆ. ಅವುಗಳು ಕಾರ್ಕಳದ ಗೌರವ, ನಾಗರಿಕ ಸಮಾಜಕ್ಕೆ ಚ್ಯುತಿ ತರುವಂತಿದೆ. ಕಾರ್ಕಳದ ಜನ ಪ್ರೀತಿ ಮತ್ತು ಗೌರವದಿಂದ, ಸೌಹಾರ್ದತೆಯಿಂದ ಜೀವನ ನಡೆಸಿಕೊಂಡು ಬಂದವರು. ಶಾಂತಿಯ ವಾತಾವರಣ ಇಲ್ಲಿ ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಮತ್ತು ಅನಂತರದಲ್ಲಿಯೂ ನೆಲೆಯೂರಿತ್ತು.
ವೈಯಕ್ತಿಕ ಟೀಕೆ, ದ್ವೇಷದ ರಾಜಕಾರಣವನ್ನು ಕಾರ್ಕಳದ ನಾಗರಿಕ ಸಮಾಜ ಎಂದೂ ಬಯಸುವುದಿಲ್ಲ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೂ ಇಲ್ಲ ಎನ್ನುವ ವಿಶ್ವಾಸವಿದೆ. ಇದರಿಂದ ರಾಜಕೀಯವಾಗಿ ಲಾಭ ಪಡೆಯಬಹುದು ಎನ್ನುವುದು ಕಾಂಗ್ರೆಸ್ಸಿನ ಅಭ್ಯರ್ಥಿ ಹಾಗೂ ಬೆಂಬಲಿಗರ ಹಗಲು ಕನಸು ಎಂದರು. ಕಾರ್ಕಳದ ಬಗ್ಗೆ ಕೇವಲ ಕರಾವಳಿಯಷ್ಟೆ ಅಲ್ಲ ನಾಡಿನೆಲ್ಲೆಡೆ ಅಪಾರ ಗೌರವ ಅಭಿಮಾನವಿದೆ. ಕಾರ್ಕಳದ ಹೆಸರು ಇದೇ ಕಾರಣಕ್ಕೆ ವಿಶ್ವದೆಲ್ಲೆಡೆ ವಿಸ್ತರಿಸಿದೆ. ಎಲ್ಲೇ ಹೋದರೂ ಜನ ಕಾರ್ಕಳದ ಬಗ್ಗೆ ಗೌರವದಿಂದ ಮಾತನಾಡುವಂತಹ ವಾತಾವರಣ ಇತ್ತೀಚಿನ ಅಭಿವೃದ್ದಿ, ಪ್ರವಾಸಿ ತಾಣಗಳ ಪ್ರಗತಿಗಳಿಂದ ನಿರ್ಮಾಣವಾಗಿದೆ.
ಕಾರ್ಕಳ ಹೆಸರೇ ಬ್ರಾಂಡ್ ಆಗಿ ಜಗತ್ತಿನೆಲ್ಲೆಡೆ ಗಮನ ಸೆಳೆಯುತ್ತಿದೆ. ಎಲ್ಲೆ ಹೋದರೂ ಕಾರ್ಕಳದವರಾ? ಎನ್ನುವಷ್ಟರ ಮಟ್ಟಿಗೆ ಕಾರ್ಕಳಕ್ಕೆ ಗೌರವ ತಂದು ಕೊಡುವ ಕೆಲಸವಾಗಿದೆ. ಆದರೇ ಈ ಎಲ್ಲ ವಿಚಾರಗಳು, ಅಭಿವೃದ್ಧಿ ಸಂಗತಿಗಳ ಬಗ್ಗೆ ಮಾತನಾಡುವ ಬದಲಿಗೆ ಕಾಂಗ್ರೆಸ್ಸಿನ ಅಭ್ಯರ್ಥಿ, ಬೆಂಬಲಿಗರು ಕಾರ್ಕಳದ ಗೌರವ ಕೆಡಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಚುನಾವಣೆ ಮೇ 10ಕ್ಕೆ ಮುಗಿಯಬಹುದು. ಬಳಿಕವೂ ಇಲ್ಲಿನವರು ಸಹಬಾಳ್ವೆಯಿಂದ ಒಳ್ಳೆಯ ವಾತಾವರಣದಲ್ಲಿ ಗೌರವದಿಂದ ಬದುಕಬೇಕಿದೆ. ಕಾಂಗ್ರೆಸ್ಸಿಗರು ವೈಯಕ್ತಿಕ ಟೀಕೆಗಳ ಬದಲಿಗೆ ಕಾರ್ಕಳಕ್ಕೆ ಗೌರವ ತರುವ ರೀತಿ ವರ್ತಿಸುವುದನ್ನು ರೂಢಿಸಿಕೊಳ್ಳಲಿ. ಒಳ್ಳೆಯ ವಿಚಾರದ ಬಗ್ಗೆ ಚರ್ಚೆಗಳನ್ನು ಮಾಡುವ ಕಡೆ ಗಮನ ಹರಿಸಲಿ ಎಂದು ಅವರು ಹೇಳಿದ್ದಾರೆ.