ನ್ಯೂಸ್ ನಾಟೌಟ್ : ಬೆಳ್ತಂಗಡಿ ಕಾಂಗ್ರೆಸ್ ಮುಖಂಡರು ಬಿಜೆಪಿ ಪರ ಕೆಲಸ ಮಾಡಿದ್ದರಿಂದಾಗಿ ಪಕ್ಷಕ್ಕೆ ಸೋಲಾಗಿದೆ. ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ನಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸುದ್ದಿಗಳನ್ನು ಹರಡಿ ತೇಜೋವಧೆ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ವಿರುದ್ಧ ಕಾಂಗ್ರೆಸ್ ನಾಯಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ ಗೌಡ ಮತ್ತು ಯುವ ಕಾಂಗ್ರೆಸ್ ಜಿಲ್ಲಾ ಮುಖಂಡ ಅಭಿನಂದನ್ ಹರೀಶ್ ಕುಮಾರ್ ಅವರು ದೂರು ಸಲ್ಲಿಸಿದ್ದಾರೆ. ನಾವು ಕಳೆದ ಎರಡೂವರೆ ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾಗಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ನಿರ್ವಹಿಸುತ್ತಿದ್ದೇವೆ. ನಮ್ಮನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನೇಮಕಗೊಳಿಸಿರುತ್ತಾರೆ.
ಆರೋಪಿಯು ನಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ, “ಹರೀಶ್ ಕುಮಾರ್, ಶೈಲೇಶ್ ಕುಮಾರ್, ರಂಜನ್ ಗೌಡ, ಗಂಗಾಧರ ಗೌಡ, ಅಭಿನಂದನ್ ಹರೀಶ್ ಕುಮಾರ್ ಮೊದಲಾದವರು ರಾತ್ರಿ ವೇಳೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಆಗಿದೆ.
ಹರೀಶ್ ಕುಮಾರ್ ಸೇರಿದಂತೆ ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷರುಗಳು ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು. ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಕುರ್ಚಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಇದು ದುರಂತ”. ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿದ್ದಾರೆ. ಈ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ ಗೌಡ ಮತ್ತು ಯುವ ಕಾಂಗ್ರೆಸ್ ಜಿಲ್ಲಾ ಮುಖಂಡ ಅಭಿನಂದನ್ ಹರೀಶ್ ಕುಮಾರ್ ಅವರು ದೂರು ಸಲ್ಲಿಸಿದ್ದಾರೆ.