ನ್ಯೂಸ್ ನಾಟೌಟ್: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ -ಟಿ10 ಜಿಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳವಾರ ಕುಕ್ಕುನೂರು ಬುಲ್ಸ್ ವಿರುದ್ಧ ಕಾಫಿ ಕ್ರಿಕೆಟರ್ಸ್ ಜಯ ಸಾಧಿಸಿತು.
ಮಂಗಳವಾರದ ಮೊದಲ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟ್ ಮಾಡಿದ ಕುಕ್ಕನೂರು ತಂಡ ನಿಗದಿತ ಹತ್ತು ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 77 ರನ್ ಪೇರಿಸಿದರು. ಐಕಾನ್ ಆಟಗಾರ ಬೈಲೆ ಡ್ಯೂಕ್ ಕಾವೇರಿ ಮೂರು 4 ಮತ್ತು ಒಂದು 6 ಸಹಾಯದೊಂದಿಗೆ 23(17) ರನ್ ಗಳಿಸಿದರು.
ಕಾಫಿ ಕ್ರಿಕೆಟರ್ಸ್ನ ವಿವಾನ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ನಂತರ ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ 8.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗೆಲುವಿನ ನಗೆ ಬೀರಿತು. ವಿವಾನ್ ಮತ್ತು ಕೇಚಪ್ಪನ ಕುಜಲ್ ಕಾರ್ಯಪ್ಪ ತಲಾ 19 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಪಂದ್ಯಾಟದಲ್ಲಿ ಕಾಫಿ ಕ್ರಿಕೆಟರ್ಸ್ ಪರವಾಗಿ ಹಿರಿಯ ಆಟಗಾರ ಯಾಲದಾಳು ಹರೀಶ್ ಆಡಿದರೆ, ಎದುರಾಳಿ ತಂಡದಲ್ಲಿ ಅವರ ಮಗ ಯಶಿನ್ ಯಾಲದಾಳು ಒಂದು ವಿಕೆಟ್ ಪಡೆದು ಗಮನ ಸೆಳೆದರು. ಹರೀಶ್ ಯಾಲದಾಳು ಈ ಟೂರ್ನಮೆಂಟಿನ ಹಿರಿಯ ಆಟಗಾರನಾಗಿದ್ದು, ಚುರುಕಿನ ಕ್ಷೇತ್ರರಕ್ಷಣೆ ಮೂಲಕ ಒಂದು ಕ್ಯಾಚ್ ಪಡೆದರು. ವಿವಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.