ನ್ಯೂಸ್ ನಾಟೌಟ್: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ.ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ.ಈ ಬಾರಿ ಭಾರಿ ಸ್ಪರ್ಧೆ ಏರ್ಪಟ್ಟಿದ್ದು,ಕುತೂಹಲ ಗರಿಗೆದರಿದೆ.ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಇದರಲ್ಲಿ ಬಜರಂಗದಳವನ್ನು ನಿಷೇಧಿಸುವ ಭರವಸೆ ಬಗ್ಗೆ ಪ್ರಸ್ತಾಪ ಮಾಡಿದೆ.ಇದು ಬಿಜೆಪಿಗರನ್ನು ಕೆರಳಿಸುವಂತೆ ಮಾಡಿದೆ.
ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರ ವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಕಾಂಗ್ರೆಸ್ ಬಜರಂಗದಳ ನಿಷೇಧ ಭರವಸೆಗೆ ಬಿಜೆಪಿ ನಾಯಕರು ಇದೀಗ ಕೆಂಡಾಮಂಡಲರಾಗಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್ಬುಕ್ ಸ್ಟೇಟಸ್ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ.ಕಾಂಗ್ರೆಸ್ ಭರವಸೆ ವಿರುದ್ಧ ಡಿಜಿಟಲ್ ಅಭಿಯಾನ ಕೈಗೊಂಡಿದ್ದು, ಬಜರಂಗದಳ ನಿಷೇಧ ಭರವಸೆಯನ್ನೇ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ ಅನ್ನೋದು ತಿಳಿದುಬಂದಿದೆ.
ಜೈ ಭಜರಂಗಿ ಕ್ಯಾಂಪೇನ್:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 7 ದಿನಗಳ ಬಾಕಿಯಿರುವ ಹೊತ್ತಿನಲ್ಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧಕ್ಕೆ ಬಿಜೆಪಿಗರು ಕೆರಳಿದ್ದು, ರಾಜ್ಯಾದ್ಯಂತ ʻಜೈ ಭಜರಂಗಿ ಕ್ಯಾಂಪೇನ್ʼ ಶುರುವಾಗಿದೆ. ಬಜರಂಗದಳವನ್ನ ʻನಾನೊಬ್ಬ ಭಜರಂಗಿʼ ಎಂದು ತಿರುಗಿಸಿದೆ. ಇನ್ನೂ ಬಿಜೆಪಿ ಹೈಕಮಾಂಡ್ ಸಹ ಎಲ್ಲ ನಾಯಕರಿಗೂ ಖಡಕ್ ಸೂಚನೆ ಕೊಟ್ಟಿದ್ದು, ಕಾಂಗ್ರೆಸ್ ಟಾರ್ಗೆಟ್ ಮಾಡಿ ಕಡೇ 7 ದಿನದ ಪ್ರಚಾರ ಮಾಡಲು ಸೂಚನೆ ನೀಡಿದೆ ಎನ್ನಲಾಗಿದೆ. ಕಾಂಗ್ರೆಸ್ ಕೊಟ್ಟ ಬಜರಂಗದಳ ನಿಷೇಧ ಭರವಸೆಯ ಬ್ರಹ್ಮಾಸ್ತ್ರದಿಂದ ರಾಜಕೀಯ ತಿರುವು ಸಿಗುತ್ತಾ? ಅನ್ನೋದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.