ನ್ಯೂಸ್ ನಾಟೌಟ್: ಉತ್ತರಾಖಾಂಡ್ ಬಿಜೆಪಿ ಮುಖಂಡನ ಮಗಳು ಹಾಗೂ ಮುಸ್ಲಿಂ ಯುವಕನ ನಡುವೆ ನಿಗದಿಯಾಗಿದ್ದ ಮದುವೆ ಕೊನೆಗೂ ಮುರಿದುಬಿದ್ದಿದೆ. ಇವರಿಬ್ಬರ ಮದುವೆ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಭಾರೀ ಟೀಕೆ ಎದುರಾಗಿರುವ ಹಿನ್ನೆಲೆಯಲ್ಲಿ ಮೇ 28ರಂದು ನಡೆಯಬೇಕಿದ್ದ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.
ವಧುವಿನ ತಂದೆ ಹಾಗೂ ಪೌರಿ ಪುರಸಭೆ ಅಧ್ಯಕ್ಷನಾಗಿರುವ ಯಶಪಾಲ್ ಬೇನಮ್, ತನ್ನ ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೇನೆ ಎಂದು ಹೇಳಿದ್ದರು. ಅಲ್ಲದೇ, ಮಗಳ ಮದುವೆ ಕಾರ್ಡ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಅನೇಕ ಹಿಂದುಪರ ಸಂಘಟನೆಗಳು ಬಿಜೆಪಿ ಮುಖಂಡನ ಮಗಳು ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದನ್ನು ವಿರೋಧಿಸಿ, ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಈ ಮದುವೆಗೆ ಸಂಬಂಧಿಸಿಂತೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಾಗಿತ್ತು. ಹಿಗಾಗಿ, ತಾವು ಸಾರ್ವಜನಿಕರ ಮಾತಿಗೆ ಗೌರವ ನೀಡುವುದರ ಜೊತೆಗೆ ಮೇ 28ರಂದು ನಡೆಯಬೇಕಿದ್ದ ತಮ್ಮ ಮಗಳ ಮದುವೆಯನ್ನು ರದ್ದುಗೊಳಿಸಿರುವುದಾಗಿ ಯಶಪಾಲ್ ಬೇನಮ್ ತಿಳಿಸಿದ್ದಾರೆ.