ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕಿನ ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿದ್ದಾಕೆ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಲಿಹಾತ್ (24) ಹೃದಯಾಘಾತದಿಂದ ಇಂದು (ಮೇ 31) ಬೆಳಗ್ಗೆ ನಿಧನರಾಗಿದ್ದಾರೆ.
ಹೃದಯ ನೋವಿನ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಅವರು ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಆದಂ ಮತ್ತು ಹವ್ವಮ್ಮ ದಂಪತಿಯ ಪುತ್ರಿಯಾಗಿರುವ ಸಾಲಿಹಾತ್ ಒಂದು ವರ್ಷದ ಹಿಂದೆ ವಿವಾಹಿತರಾಗಿದ್ದು, ಸದ್ಯ ಚಿಕ್ಕಮಗಳೂರಿನಲ್ಲಿರುವ ಪತಿ ಮನೆಯಲ್ಲಿದ್ದವರು ಎನ್ನಲಾಗಿದೆ.
ರಾಷ್ಟ್ರದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಶನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದರು. ಮೃತರು ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.