ನ್ಯೂಸ್ ನಾಟೌಟ್ : ತಾವು ಸ್ಥಿತಿವಂತರಾದ ಮೇಲೆ ಬಳಿಕ ಪೋಷಕರನ್ನೇ ದೂರ ಮಾಡಿದ ಮಕ್ಕಳ ಹಲವು ಘಟನೆಗಳಂತೆ ಇಲ್ಲೊಂದು ಘಟನೆ ವರದಿಯಾಗಿದೆ, ಹೀಗೆ ತನ್ನ ಇಬ್ಬರು ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ್ದ. ಮೊದಲ ಪುತ್ರ ಐಎಎಸ್ ಅಧಿಕಾರಿಯಾದರೆ, ಮತ್ತೊಬ್ಬ ಉದ್ಯಮಿಯಾಗಿದ್ದಾನೆ. ಆದರೆ ತಂದೆ ಅನಾಥಾಶ್ರಮ ಸೇರಿದ್ದಾರೆ ಎನ್ನುವುದು ವಿಚಿತ್ರ.
ತಾನೂ ಕಷ್ಟಪಟ್ಟು ದುಡಿದ ಇಬ್ಬರು ಮಕ್ಕಳಿಗೆ ಬಂಗಲೆ, ನಿವೇಶನ ಮಾಡಿಕೊಟ್ಟಿದ್ದಾರೆ. ಇಬ್ಬರು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಇದಾದ ಮೇಲೆ ಮಕ್ಕಳು ತಂದೆಯನ್ನು ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ, ಹೀಗಾಗಿ ಗೌರವ ನೀಡದ ಮನೆಯಲ್ಲಿ, ಗೌರವ ನೀಡದ ಮಕ್ಕಳ ಜೊತೆ ಬಾಳವುದಕ್ಕಿಂತ ಅನಾಥಾಶ್ರಮದಲ್ಲಿ ಬಾಳುವುದೇ ಮೇಲೆ ಎಂದು ತಂದೆ ನೇರವಾಗಿ ಅನಾಥಾಶ್ರಮ ಸೇರಿಕೊಂಡ ಘಟನೆ ಆಗ್ರಾದ ಸಿಕಂದ್ರದಲ್ಲಿ ನಡೆದಿದೆ.
78 ವರ್ಷದ ತಂದೆ ತನ್ನ ದುಡಿಮೆಯಲ್ಲಿ ಮಾಡಿದ ಆಸ್ತಿ ಅಂತಸ್ತು ಎಲ್ಲವನ್ನೂ ಬಿಟ್ಟು ಇದೀಗ ಸಿಕಂದ್ರ ಬಳಿ ಇರುವ ರಾಮ್ ಲಾಲ್ ಅನಾಥಾಶ್ರಮ ಸೇರಿಕೊಂಡಿದ್ದಾರೆ. ತನ್ನ ಮಾತು ನಡತೆ, ಹಾಕಿರುವ ಬಟ್ಟೆ, ಶೂ ಎಲ್ಲವನ್ನೂ ನೋಡಿದ ಅನಾಥಾಶ್ರಮ ಸಿಬ್ಬಂದಿ, ಇವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಹೇಳಿ ಕಣ್ಣೀರು ಹಾಕಿದ್ದಾರೆ.
ಇಬ್ಬರೂ ಮಕ್ಕಳು ಹಾಗೂ ಅವರ ಕುಟುಂಬ ನನಗೆ ಗೌರವ ನೀಡುತ್ತಿಲ್ಲ. ನಾನು ಅಲ್ಲಿರುವುದೇ ಅವರಿಗೆ ಶಾಪವಾಗಿ ಕಾಣುತ್ತಿದೆ. ನಾನು ಎಲ್ಲಾದರೂ ಹೋಗಿ ಮರಳಿ ಮನೆಗೆ ಬಂದರೆ ತಕ್ಷಣ ಮಕ್ಕಳು ಮನೆಯಿಂದ ಹೊರಗೆ ಹೋಗುತ್ತಾರೆ. ನನ್ನಲ್ಲಿ ಮಾತನಾಡುವುದಿಲ್ಲ. ನನಗೆ ಯಾವದೇ ರೀತಿಯ ಗೌರವ ಕೊಡುವುದಿಲ್ಲ. ಚುಚ್ಚು ಮಾತಿನಿಂದ ಮಾನಸಿಕವಾಗಿ ನನ್ನನ್ನು ದೂಷಿಸುತ್ತಾರೆ. ಕಿರಿಯ ಪುತ್ರ ಮನೆ ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದಾನೆ. ನನ್ನ ಬಳಿ ಎಲ್ಲವೂ ಇದೆ ಆದರೆ ನನಗೆ ಗೌರವವೇ ಇಲ್ಲ. ನಾನು ಹೊರೆಯಾಗಿರುವಂತೆ ವರ್ತಿಸುತ್ತಾರೆ. ಹೀಗಾಗಿ ನಾನು ಅನಾಥಾಶ್ರಮ ಸೇರಿಕೊಂಡಿದ್ದೇನೆ ಎಂದು 78 ವರ್ಷದ ತಂದೆ ಹೇಳಿದ್ದಾರೆ.
ಬ್ಯಾಂಕ್ ಖಾತೆಯಲ್ಲಿನ ಇಟ್ಟಿದ್ದ ದುಡ್ಡಿನಲ್ಲಿ ಒಂದಿಷ್ಟು ಮೊತ್ತವನ್ನು ಅನಾಥಾಶ್ರಮಕ್ಕೆ ನೀಡಿದ್ದಾರೆ. ಇಬ್ಬರು ಮಕ್ಕಳಿಗೆ ಅನಾಥಾಶ್ರಮಕ್ಕೆ ಹೋಗುತ್ತಿರುವ ವಿಚಾರ ಹೇಳಿಲ್ಲ. ಆದರೆ ಇದುವರೆಗೆ ಮಕ್ಕಳು ತಂದೆ ಎಲ್ಲಿದ್ದಾರೆ ಅನ್ನೋ ಹುಡುಕುವ ಪ್ರಯತ್ನ ಮಾಡಿಲ್ಲ. ನಾನು ಕಷ್ಟಪಟ್ಟು ದುಡಿದು ಎಲ್ಲವನ್ನೂ ಸಂಪಾದಿಸಿದೆ. ಆದರೆ ಮಕ್ಕಳಿಂದ ಗೌರವ ಸಂಪಾದಿಸಲು ಸಾಧ್ಯವಾಗಿಲ್ಲ. ಅವರಿಗೆ ಎಲ್ಲವನ್ನೂ ಮಾಡಿದ್ದೇನೆ. ಆದರೆ ವಿಶ್ರಾಂತಿ ಜೀವನದಲ್ಲಿ ನನಗೆ ಏನೂ ಸಿಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.