ನ್ಯೂಸ್ ನಾಟೌಟ್: ಚುನಾವಣೆ ಬರುತ್ತಿದ್ದಂತೆ ಎಲ್ಲೆಡೆ ನೀತಿ ಸಂಹಿತೆ ಕಟ್ಟು ನಿಟ್ಟಿನ ನಿಯಮಾವಳಿ ಜಾರಿಗೆ ಬಂದಿದೆ. ಆದರೆ ಸುಳ್ಯ ತಾಲೂಕಿನ ಕೆಲವು ವೈನ್ ಶಾಪ್ಗಳು ಎಲ್ಲ ನಿಯಮಾವಳಿಯನ್ನು ಗಾಳಿಗೆ ತೂರಿವೆ. ಮಾತ್ರವಲ್ಲ ಪಾನ ಪ್ರಿಯರಿಗೆ ಗುಟ್ಟಾಗಿ ಎಣ್ಣೆ ಕುಡಿಸುವುದರಲ್ಲಿಯೇ ತಲ್ಲೀನವಾಗಿವೆ.
ಹೌದು, ಸುಳ್ಯ ತಾಲೂಕಿನ ಹಲವು ಕಡೆ ವೈನ್ ಶಾಪ್ನವರು ನಿಯಮಾವಳಿಯನ್ನು ಗಾಳಿಗೆ ತೂರಿ ಲೂಸ್ ಮದ್ಯವನ್ನ ಗ್ರಾಹಕರಿಗೆ ನೀಡುತ್ತಿದ್ದಾರೆ ಅನ್ನುವ ದೂರುಗಳು ಕೇಳಿ ಬಂದಿವೆ. ವೈನ್ ಶಾಪ್ನಲ್ಲಿ ಮದ್ಯವನ್ನು ಪಾರ್ಸೆಲ್ ತೆಗೆದುಕೊಳ್ಳುವುದಕ್ಕೆ ಮಾತ್ರ ಅವಕಾಶ ಇದೆ. ಆದರೆ ಮದ್ಯ ಪಾರ್ಸೆಲ್ ಮಾಡುವ ಅದೇ ಶಾಪ್ಗಳಲ್ಲಿ ಗುಟ್ಟಾಗಿ ಲೂಸ್ ಮದ್ಯವನ್ನೂ ಜನರಿಗೆ ಕಾನೂನು ಬಾಹಿರವಾಗಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಅಬಕಾರಿ ಹಾಗೂ ಪೊಲೀಸರು ನೋಡಿಯೂ ನೋಡದಂತಿರುವುದು ವಿಪರ್ಯಾಸವೇ ಸರಿ.
ವೈನ್ಶಾಪ್ನಲ್ಲಿ ಕೊಟ್ಟವರ ಮೇಲಿಲ್ಲ ಕೇಸು..!
ಮೂರ್ನಾಲ್ಕು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು ಎಂಬಲ್ಲಿ ಬಸ್ ಸ್ಟ್ಯಾಂಡ್ನಲ್ಲಿ ಕುಳಿತು ಮದ್ಯ ಸೇವಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಕೇಸು ಜಡಿದಿದ್ದರು. ಆದರೆ ಜನರಿಗೆ ಲೂಸ್ ಮದ್ಯವನ್ನು ಮಾರಾಟ ಮಾಡಬಾರದು ಎನ್ನುವ ನಿಯಮ ಇದ್ದರೂ ಕೆಲವು ವೈನ್ ಶಾಪ್ನವರು ಲೂಸ್ ಮದ್ಯ ಮಾರಾಟ ಮಾಡಿದರೂ ಅವರ ಮೇಲೆ ಪೊಲೀಸರು ಏಕೆ ಕೇಸು ದಾಖಲಿಸಲಿಲ್ಲ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಬಾರ್ – ವೈನ್ ಶಾಪ್ ನಡುವಿನ ವೆತ್ಯಾಸವೇನು?
ಬಾರ್ ಅಂಡ್ ರೆಸ್ಟೋರೆಂಟ್ ಬೆಳಗ್ಗೆ 10 ಗಂಟೆಯಿಂದ ತಡರಾತ್ರಿ 11.30ರ ತನಕ ತೆರೆದಿಡಲು ಅವಕಾಶ ಇದೆ. ಇಲ್ಲಿ ಲೂಸ್ ಮದ್ಯವನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು. ಇದು ಕಾನೂನಿನ ಉಲ್ಲಂಘನೆಯಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಪಾನಪ್ರಿಯರು ಕುಳಿತು ಆರಾಮವಾಗಿ ಮದ್ಯ ಸೇವಿಸಬಹುದು. ಜತೆಗೆ ಮನೆಗೂ ಮದ್ಯ ಕೊಂಡು ಹೋಗಬಹುದು. ಆದರೆ ವೈನ್ ಶಾಪ್ ವಿಚಾರದಲ್ಲಿ ಹಲವು ಬಿಗಿ ನಿಯಮಗಳಿವೆ. ಶಾಪ್ನಲ್ಲಿ ಕುಳಿತು ಕುಡಿಯುವಂತಿಲ್ಲ. ವೈನ್ ಶಾಪ್ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶ ಇದೆ.
ಮದ್ಯದಂಗಡಿಗಳಿಂದ ನಿಯಮ ಉಲ್ಲಂಘನೆ?
ಬಾರ್ ಮತ್ತು ವೈನ್ ಶಾಪ್ಗಳ ನಡುವೆ ಎರಡು ವೆತ್ಯಾಸವಿದೆ. ಮೊದಲನೆಯದ್ದು ಸಿಎಲ್2ಹಾಗೂ ಎರಡನೆಯದ್ದು ಸಿಎಲ್9. ಸಿಎಲ್2 ಪ್ರಕಾರ ವೈನ್ ಶಾಪ್ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10.30ರ ತನಕ ಓಪನ್ ಮಾಡುವುದಕ್ಕೆ ಅವಕಾಶ ಇದೆ. ಇನ್ನು ಸಿಎಲ್9 ಪ್ರಕಾರ ಬಾರ್ ಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 11.30ರ ತನಕ ಕಾರ್ಯಾಚರಣೆ ನಡೆಸಲು ಅವಕಾಶ ಇದೆ. ಆದರೆ ಹಲವು ವೈನ್ ಶಾಪ್ಗಳು ಮತ್ತು ಬಾರ್ ಗಳು ನಿಯಮವನ್ನು ಮೀರಿ ಬೆಳಗ್ಗೆ ಬೇಗ ಹಾಗೂ ರಾತ್ರಿ ನಿಗದಿತ ಸಮಯವನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ ಅನ್ನುವ ದೂರುಗಳು ಕೇಳಿ ಬಂದಿವೆ.