ನ್ಯೂಸ್ ನಾಟೌಟ್ : ಉಪ್ಪಿನಂಗಡಿಯ ಕೆಂಪಿಮಜಲಿನ ಆನಂದ ಟೈಲರ್ ಎಂಬವರಿಗೆ ಅದೃಷ್ಟ ಲಕ್ಷ್ಮಿ ಒಲಿದು ಬಂದಿದೆ. ಕೇರಳ ರಾಜ್ಯ ಲಾಟರಿ ಕಾರುಣ್ಯ’ದ ಪ್ರಥಮ ಬಹುಮಾನವಾದ 80 ಲಕ್ಷ ರೂ. ವಿಜೇತರಾಗಿದ್ದು ಅವರ ಕುಟುಂಬ ವರ್ಗ ಆನಂದವನ್ನು ವ್ಯಕ್ತ ಪಡಿಸಿದೆ.
ಜೀವನದಲ್ಲಿ ಕಷ್ಟಗಳನ್ನೆ ಎದುರಿಸುತ್ತಾ ಬಂದಿರುವ ಟೈಲರ್ ಆನಂದ ಅವರು ಬದುಕಿನ ಬಂಡಿ ಸಾಗಿಸಲು ಟೈಲರ್ ವೃತ್ತಿಯನ್ನು ಕಳೆದ ೩೦ ವರ್ಷಗಳಿಂದ ಆರಂಭಿಸಿದ್ದರು.ಹೀಗಾಗಿ ಬೇರೆನೂ ಆದಾಯವಿಲ್ಲದೇ ಬಾರಿ ಕಷ್ಟ ಅನುಭವಿಸಿದ್ದರು.ಕಾಲು ನೋವಿನ ಸಮಸ್ಯೆ ಇರುವುದರಿಂದಾಗಿ ಯಾವುದೇ ಕೆಲಸ ಮಾಡಕ್ಕಾಗದೇ ಕೆಲಸಕ್ಕೆ ವಿದಾಯ ಹೇಳಿದರು.ಸದ್ಯ 72ನೇ ವಯಸ್ಸಿನಲ್ಲಿನಲ್ಲಿರುವ ಅವರು ಮನೆಯಲ್ಲೇ ಇದ್ದಾರೆ.
ಇವರ ಪತ್ನಿ ಗೃಹಿಣಿ. ಆನಂದ ಅವರು ಕಷ್ಟ ಪಟ್ಟು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡಿದ್ದಾರೆ. ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರ ವಿದ್ಯಾಭ್ಯಾಸದ ಬಳಿಕ ಪುತ್ರಿಯನ್ನು ಕೇರಳದ ನೀಲೇಶ್ವರಕ್ಕೆ ಮದುವೆ ಮಾಡಿಕೊಡಲಾಗಿದೆ. ಪುತ್ರರಿಬ್ಬರು ಉದ್ಯೋಗ ಮಾಡಿಕೊಂಡು ಕುಟುಂಬದ ಆಧಾರವಾಗಿದ್ದರು.
ಲಾಟರಿ ಗೀಳು ಒಳ್ಳೆಯದಲ್ಲ.ಅದರ ಹಿಂದೆ ಬಿದ್ರೆ ಸಾಲ ಮಾಡಿಕೊಂಡವರು ಅಧಿಕ ಮಂದಿ ಇದ್ದಾರೆ ನಿಜ.ಹಾಗಂತ ಆನಂದ ಅವರು ಇದನ್ನು ಹವ್ಯಾಸವನ್ನಾಗಿ ಮೈಗೂಡಿಸಿಕೊಂಡವರಲ್ಲ.ಬದಲಿಗೆ ಮಗಳನ್ನು ಕೇರಳ ಕಡೆಗೆ ಮದುವೆ ಮಾಡಿಕೊಟ್ಟಿರುವುದರಿಂದ ಆ ಕಡೆಗೆ ಹೋದಾಗ ಅಪರೂಪಕ್ಕೊಮ್ಮೆ ಲಾಟರಿ ಖರೀದಿಸುತ್ತಿದ್ದರು.ಕಳೆದ ಒಂದು ವಾರದ ಹಿಂದೆಯಷ್ಟೇ ಮಗಳ ಮನೆಗೆಂದು ಹೋಗಿದ್ದಾಗ ಇವರು ಕೇರಳ ರಾಜ್ಯದ ಕಾರುಣ್ಯ’ ಲಾಟರಿಯನ್ನು ಕಾಸರಗೋಡಿನ `ಬೊಳ್ಪು’ ಲಾಟರಿ ಏಜೆನ್ಸಿಯವರಿಂದ ಲಾಟರಿ ಕೊಂಡುಕೊಂಡರು.ಎ.15ರಂದು ಡ್ರಾ ಆದ ಆ ಲಾಟರಿಯಲ್ಲಿ ಆನಂದ ಟೈಲರ್ ಅವರಿಗೆ ಪ್ರಥಮ ಬಹುಮಾನ ಮೊತ್ತ 80 ಲಕ್ಷ ರೂ. ಒಲಿದಿದೆ.