ನ್ಯೂಸ್ನಾಟೌಟ್: ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್ಎಸ್ಎಫ್ ನಾಯಕ ಅಲ್ತಾಫ್ ಕುಂಪಲ ಪಕ್ಷದ ಮುಖಂಡರಿಗೆ ಮಾಹಿತಿಯೇ ನೀಡದೆ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಅಲ್ಲದೆ ನಾಯಕರ ಸಂಪರ್ಕಕ್ಕೂ ಸಿಗದೆ ಕಳೆದ ಎರಡು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ನಾಯಕರು ಆರೋಪಿಸಿದ್ದಾರೆ.
ಅಲ್ತಾಫ್ ಕುಂಪಲ ಇವರು ಹಲವು ವರ್ಷಗಳಿಂದ ಎಸ್ಎಸ್ಎಫ್ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರು. ಇತ್ತೀಚೆಗೆ ಜೆಡಿಎಸ್ನಲ್ಲಿ ಕಾಣಿಸಿಕೊಂಡ ಅವರು ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರುಕ್ ಅವರ ಮನವೊಲಿಸಿ ಜೆಡಿಎಸ್ನಿಂದ ಉಳ್ಳಾಲ ಕ್ಷೇತ್ರದಿಂದ ಸ್ಪರ್ಧಿಸಲು ಬಿಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಉಳ್ಳಾಲ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದ್ದ ಅವರು ಪ್ರಚಾರ ಕಾರ್ಯದಲ್ಲಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಆದರೆ ಏ.21ರಂದು ಅಲ್ತಾಫ್ ತನ್ನ ಪಕ್ಷದ ಮುಖಂಡರಿಗೆ ಮಾಹಿತಿ ನೀಡದೆ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು. ಈ ಕುರಿತು ಏ.22ರಂದು ನೋಟಿಸ್ ಬೋರ್ಡ್ನಲ್ಲಿ ಮಾಹಿತಿ ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೆಡಿಎಸ್ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ಮುಖಂಡರು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.