ನ್ಯೂಸ್ ನಾಟೌಟ್: ಉಳ್ಳಾಲ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ಕಾಂಗ್ರೆಸ್ ಪಕ್ಷದ ಯು.ಟಿ. ಖಾದರ್ ಬೆಂಬಲಿಗರು ಅಪಹರಿಸಿ, ಬೆದರಿಸಿ ಬಲವಂತವಾಗಿ ಕರೆದೊಯ್ದು ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಲ್ತಾಫ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಅಲ್ಲದೆ ಭದ್ರತೆ ನೀಡುವಂತೆ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಮಾತನಾಡಿ, ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನಿಶ್ಚಿತ. ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಮೊಯಿದೀನ್ ಬಾವಾ ಅವರನ್ನು ಕಣಕ್ಕಿಳಿಸಿದ್ದು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿದ್ದು ಎಲ್ಲ ಕಡೆಯೂ ನಾಮಪತ್ರ ಸಿಂಧು ಆಗಿತ್ತು. ಮಂಗಳೂರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬೇಕಾದ ಅಲ್ತಾಫ್ ಕುಂಪಲ ಎಂಬ ಒಬ್ಬ ವ್ಯಕ್ತಿಯನ್ನು ಅವರ ಸಮಾಜಸೇವೆ ಗುರುತಿಸಿ ಟಿಕೆಟ್ ನೀಡಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಅವರು ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಸಮಾಜದ ಜನರನ್ನು ಹೇಗೆ ನಡೆಸಿಕೊಳ್ಳಬಹುದು. ಇಂಥಹ ಘಟನೆ ಇಡೀ ಜಿಲ್ಲೆಗೆ ಕಪ್ಪು ಚುಕ್ಕೆ ನಾವು ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡುತ್ತೇವೆ ಎಂದರು.
ನಜೀರ್ ಉಳ್ಳಾಲ್, ವಸಂತ ಪೂಜಾರಿ, ಅಶ್ರಫ್ ಸಾಜೀದ್, ಆಶ್ರಫ್ ಖಾಜಿ, ಯು ಜನತಾದಳದ ಅಕ್ಷಿತ್ ಸುವರ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.