ನ್ಯೂಸ್ ನಾಟೌಟ್ :ಸುಳ್ಯದ ಮಂಡೆಕೋಲು ಅಜ್ಜಾವರ ಭಾಗದಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ಹಾನಿ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿರುವ ಬೆನ್ನಲ್ಲೇ ನಾಲ್ಕು ಆನೆಗಳು ಕೆರೆಗೆ ಬಿದ್ದು ಲಾಕ್ ಆಗಿರುವ ಘಟನೆ ನಡೆದಿತ್ತು. ಅಜ್ಜಾವರ ಗ್ರಾಮದ ತುದಿಯಡ್ಕ ದ ಸಂತೋಷ್ ರವರ ತೋಟದ ಕೆರೆಗೆ ಎರಡು ದೊಡ್ಡ ಗಾತ್ರದ ಆನೆ ಹಾಗೂ ಎರಡು ಮರಿಯಾನೆಗಳು ಬಿದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು.
ಈ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರೆಲ್ಲ ಕೆರೆಯಲ್ಲಿ ಲಾಕ್ ಆದ ಆನೆಗಳನ್ನು ವೀಕ್ಷಿಸಲೆಂದೇ ಗುಂಪುಗೂಡಿದ್ದರು.ಇದೀಗ ಗಜಪಡೆಗಳನ್ನು ಯಶಸ್ವಿಯಾಗಿ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆದಿದೆ.ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನಾಲ್ಕೂ ಆನೆಗಳನ್ನು ಮೇಲಕ್ಕೆತ್ತಲಾಗಿದೆ.
ಕಳೆದ ಹಲವು ಸಮಯಗಳಿಂದ ಕಾಡಾನೆಗಳ ಉಪಟಳ ಜೋರಾಗಿದೆ ಎನ್ನುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ರೈತರು ಆನೆ ಉಪಟಳ ತಾಳಲಾರದೇ ಕಂಗಾಲಾಗಿದ್ದರು.ಇದೀಗ ನಿನ್ನೆಯಷ್ಟೇ ರಾತ್ರಿ ಏಳೆಂಟು ಆನೆಗಳು ಬಂದು ತುದಿಯಡ್ಕ ಪ್ರದೇಶದಲ್ಲಿ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ ಎಂದು ತಿಳಿದು ಬಂದಿತ್ತು. ಸಂತೋಷ್ ಎಂಬುವವರ ತೋಟದ ಮಧ್ಯೆ ಕೆರೆಯಿದ್ದು ನಾಲ್ಕು ಕಾಡಾನೆಗಳು ಬಿದ್ದಿರುವುದು ಗಮನಕ್ಕೆ ಬಂದಿರುವುದನ್ನು ಕೂಡಲೇ ಸ್ಥಳೀಯರೆಲ್ಲ ಸೇರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದೀಗ ಅರಣ್ಯ ಇಲಾಖೆ ನೇತೃತ್ವದಲ್ಲಿ ಹಾಗೂ ಸ್ಥಳೀಯರ ನೆರವಿನಲ್ಲಿ ಹರಸಾಹಸ ಪಟ್ಟು ಮೇಲಕ್ಕೆ ಹತ್ತಿಸಲಾಗಿದೆ.