ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್: ಕಾರ್ಕಳ ವಿಧಾನ ಸಭಾ ಕ್ಷೇತ್ರ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಸಲ ಕಾರ್ಕಳದಲ್ಲಿ ಗೆಲುವು ಯಾರಿಗೆ? ಬಿಜೆಪಿಯ ಅಭ್ಯರ್ಥಿ ವಿ ಸುನಿಲ್ ಕುಮಾರ್ ವಿಜಯದ ನಾಗಾಲೋಟ ಮುಂದುವರಿಯುವುದೇ? ಕಾಂಗ್ರೆಸ್ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಮುನಿಯಾಲ್ ಗೆ ಜನ ಮತ ಹಾಕ್ತಾರಾ..? ಇದೆಲ್ಲದರ ಬಗ್ಗೆ ಕಾರ್ಕಳದಲ್ಲಿ ನ್ಯೂಸ್ ನಾಟೌಟ್ ಫೀಲ್ಡ್ ವರ್ಕ್ ಮಾಡಿ ಜನಾಭಿಪ್ರಾಯವನ್ನು ಸಂಗ್ರಹಿಸಿದೆ. ಈ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ…
ಜನಾಭಿಪ್ರಾಯ ಸಂಗ್ರಹದಲ್ಲಿ ನ್ಯೂಸ್ ನಾಟೌಟ್ ಪ್ರತಿನಿಧಿ ಮೊದಲನೆಯದಾಗಿ ಕಾರ್ಕಳದ ಹೋಟೆಲ್ ಮಾಲೀಕರಾದ ವಿಜಯ ಎಸ್ . ಪೂಜಾರಿಯವರನ್ನು ಮಾತನಾಡಿಸಿದರು. ಈ ವೇಳೆ ಮಾತನಾಡಿದ ವಿಜಯ ಎಸ್ ಪೂಜಾರಿಯವರು, ‘ಈ ಸಲ ಬಿಜೆಪಿಗೆನೇ ಗೆಲುವು ಅನ್ನುವುದು ಖಚಿತ, ಸುನೀಲ್ ಕುಮಾರ್ ಆಡಳಿತದಲ್ಲಿ ಉತ್ತಮ ರೀತಿಯಲ್ಲಿ ಕೆರೆಗಳು ,ಅಣೆಕಟ್ಟು , ಮಾರಿಗುಡಿ ದೇವಸ್ಥಾನ ,ಪರಶುರಾಮ್ ಥೀಮ್ ಪಾರ್ಕ್ ,ರಸ್ತೆಗಳು ಅಭಿವೃದ್ಧಿಯಾಗಿದೆ.
ಬಿಜೆಪಿಯವರು ಕೆಲಸ ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ವರ್ಷ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಇದೆ ಎಂದು ಆಟೋ ಚಾಲಕ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಕಷ್ಟ ಸುಖಕ್ಕೆ ಬಿಜೆಪಿ ತಕ್ಷಣ ಸ್ಪಂದಿಸುತ್ತದೆ. ಹಾಗಿರುವುದರಿಂದ ಬಿಜೆಪಿ ಬಂದರೆ ಒಳ್ಳೆಯದು ಎಂದು ಸ್ಥಳೀಯ ಹೂ ವ್ಯಾಪಾರಿ ಲಕ್ಷ್ಮಮ್ಮ ಪ್ರತಿಕ್ರಿಯಿಸಿದರು.
ಸುನಿಲ್ ಕುಮಾರ್ ಆಡಳಿತದಲ್ಲಿ ಅಭಿವೃದ್ಧಿಯಾಗಿದೆ. ಇನ್ನೂ ಕೆಲಸಗಳು ಆಗಬೇಕು. ಈ ಸಲ ಯಾವ ಪಕ್ಷ ಗೆಲ್ಲಲಿ ಮೊದಲು ನಮ್ಮ ಮೀನು ಮಾರ್ಕೆಟ್ ಸರಿ ಮಾಡಿಕೊಡಿ. ಇಲ್ಲಿ ಮೀನು ತೊಳೆದ ನೀರು ಸರಿಯಾಗಿ ಹೋಗಲು ವ್ಯವಸ್ಥೆ ಇಲ್ಲ. ಇಲ್ಲಿ ಬರುವ ಗ್ರಾಹಕರು ಪಾಚಿ ತುಂಬಿದ್ದರಿಂದ ಹಲವು ಗ್ರಾಹಕರು ಜಾರಿ ಬಿದ್ದಿದ್ದಾರೆ ಎಂದು ಸ್ಥಳೀಯ ಮೀನು ವ್ಯಾಪಾರಿ ವಿಮಲ ಪ್ರತಿಕ್ರಿಯಿಸಿದರು.
ಮೊದಲು ಚರಂಡಿ ವ್ಯವಸ್ಥೆ ಮಾಡಿ ಕೊಡಿ. ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ತುಂಬಿ ಹೊಳೆ ತರ ಆಗಿದೆ. ಮಳೆಗಾಲದ ಮುಂಚಿತವಾಗಿ ಚರಂಡಿ ವ್ಯವಸ್ಥೆಮಾಡಬೇಕಿದೆ . ಅಲ್ಲದೆ ಚರಂಡಿ ವ್ಯವಸ್ಥೆ LIC ಆಫೀಸ್ ನಿಂದ ವೆಂಕಟರಮಣ ದೇವಸ್ಥಾನದವರೆಗೆ ಆಗಬೇಕಿದೆ ಎಂದು ಎಲೆ ಅಡಿಕೆ ವ್ಯಾಪಾರಿ ಫ್ರಾನ್ಸಿಸ್ ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ 50-50 ಪೈಟ್ ಇದೆ. ಈ ಸಲ ಯಾರಿಗೆ ಗೆಲುವು ನಿಶ್ಚಯವಿಲ್ಲ. ಯಾವ ಪಕ್ಷ ಗೆಲ್ಲಲಿ ಮೊದಲು ಪಾಪದವರಿಗೆ ಮನೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಕೆಲಸ ಮಾಡಿಕೊಟ್ಟರೆ ಒಳ್ಳೆಯದು ಎಂದು ಸ್ಥಳೀಯರಾದ ದೇವದಾಸ್ ತಿಳಿಸಿದರು.
ಬಸ್ ಸ್ಟಾಂಡ್ ವ್ಯವಸ್ಥೆ ಸರಿಯಿಲ್ಲ. ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಜನರಿಗೆ ನಿಲ್ಲಲು ಕೊಠಡಿ ವ್ಯವಸ್ಥೆಯಿಲ್ಲ.ಎಲ್ಲಾ ವಾಹನಗಳು ಬಸ್ ನಿಲ್ದಾಣ ಒಳಗೆ ನಿಲ್ಲಿಸಿರುತ್ತಾರೆ. ಆದ್ದರಿಂದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ತರ ವ್ಯವಸ್ಥೆ ಮಾಡಿಕೊಡಿ ಎಂದು ಬಸ್ ಚಾಲಕ ಸಂಘದ ರಶಬ್ ಆರ್. ಜೈನ್ ಒತ್ತಾಯಿಸಿದರು.