ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನವ ಮಾಸ ಹೊತ್ತು ಸಾಕಿ ಸಲಹುವ ತಾಯಿಯ ಕಷ್ಟಗಳನ್ನು ಪದಗಳಲ್ಲಿ ಹೇಳುವುದು ಕಷ್ಟ. ಹಾಗೆಯೇ ಇಲ್ಲೊಬ್ಬ ತಾಯಿ ಮಗುವಿಗೆ ಜನನ ಕೊಡುವ ಸಂದರ್ಭದಲ್ಲಿ ತೀವ್ರ ರಕ್ತಸ್ರಾವಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ನಿಂದ ವರದಿಯಾಗಿದೆ.
ಸುಳ್ಯ ತಾಲೂಕಿನ ಕಲ್ಮಕಾರು ಎಸ್ಟೇಟ್ನಲ್ಲಿ ಅಸ್ಸಾಂ ಮೂಲದವರು ಕೂಲಿ ಕೆಲಸಕ್ಕೆಂದು ಬಂದವರು ವಾಸವಿದ್ದಾರೆ. ಸಣ್ಣ ಕಟ್ಟಡದಲ್ಲಿ ಅಲ್ಲಿಯೇ ಅವರ ಜೀವನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಲಿ ವಾಸವಿದ್ದ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ರಾತ್ರಿ 11ಗಂಟೆಗೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ಗೆ ಕರೆ ಮಾಡಲಾಗುತ್ತದೆ. ಆದರೆ ಆ ವೇಳೆಗಾಗಲೇ ಕಟ್ಟಡದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿರುತ್ತಾಳೆ. ಆದರೆ ಹೊಕ್ಕಳ ಬಳ್ಳಿ ಕಡಿದುಕೊಳ್ಳದೆ ಮಗು ಪ್ರಪಂಚಕ್ಕೆ ಕಾಲಿರಿಸಿತ್ತು. ವಿಪರೀತ ರಕ್ತ ಸ್ರಾವದಿಂದ ಮಹಿಳೆ ನರಳುತ್ತಿದ್ದಳು. ಆ ತಡರಾತ್ರಿ ವೈದ್ಯರನ್ನು ಕರೆದುಕೊಂಡು ಬರುವುದು ಕಷ್ಟದ ವಿಚಾರ ಆಗಿತ್ತು. ಈ ವೇಳೆ ಸಮಾಜ ಸೇವಕ ಚಂದ್ರಶೇಖರ್ ಕಡೋಡಿಯವರು ತಮ್ಮ ಆತ್ಮ ವಿಶ್ವಾಸದೊಂದಿಗೆ, ಹೆರಿಗೆಯಾದ ಕಟ್ಟಡದಿಂದ ಸ್ವಲ್ಪ ದೂರ ತಡರಾತ್ರಿ ಅಲ್ಲಿ ಇದ್ದ ಜನರೊಂದಿಗೆ ಸೇರಿ ಸ್ಟೇಚರ್ ಬಳಸಿ ಅತ್ಯಂತ ಜಗುರುಕತೆಯೊಂದಿಗೆ ಮಗುವನ್ನು ತಾಯಿಯ ಕಾಲಿನ ಮದ್ಯ ಇರಿಸಿ ಜೊತೆಗೆ ರಸ್ತೆ ವರೆಗೂ ಎತ್ತಿಕೊಂಡು ಬರುವಲ್ಲಿ ಸಪಲರಾಗಿ ತಮ್ಮ ಆಂಬುಲೆನ್ಸ್ ಚಾಲಕ ಸುನಿಲ್ ಅಮೆ ರೊಂದಿಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ಆಂಬ್ಯುಲೆನ್ಸ್ನಲ್ಲಿ ನಾಜೂಕಾಗಿ ಸುಳ್ಯದ ಸರಕಾರಿ ಆಸ್ಪತ್ರೆಗೆ ತಾಯಿ- ಮಗುವನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದರು.
ಪ್ರಯಾಣದ ದಾರಿಯುದ್ಧಕ್ಕೂ ತಾಯಿಯ ಕಾಲಿನ ಮದ್ಯೆ ಮಗುವನ್ನು ಮಲಗಿಸಿಕೊಂಡು ಗರ್ಭಿಣಿಯ ತಾಯಿ ಮತ್ತು ಗಂಡನ ಜೊತೆಯಾಗಿ ಕರೆದುಕೊಂಡು ಬರಲಾಗಿದೆ. ಒಂದು ಕಡೆ ಮಗುವಿನ ಅಳು, ಮತ್ತೊಂದು ಕಡೆ ತಾಯಿಗೆ ಆಗುತ್ತಿರುವ ರಕ್ತಸ್ರಾವದಿಂದ ಎಲ್ಲರು ಗಾಬರಿಯಾಗಿದ್ದರು. ಸದ್ಯ ತಾಯಿ ಹಾಗೂ ಗಂಡು ಮಗು ಸುಳ್ಯ ಸರಕಾರಿ ಆಸ್ಪತ್ರೆ ಸಿಬ್ಬಂದಿ ಯಶಸ್ವಿ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.ತಡರಾತ್ರಿ ಕಾಡನೆಗಳ ಭಯವಿರುವ ಹರಿಹರ ಕಲ್ಮಕಾರ್ ಎಸ್ಟೇಟ್ ಕಚ್ಚ ರಸ್ತೆ ಮೂಲಕ 60ಕಿಲೋಮೀಟರ್ ಕ್ರಮಿಸಿರುವುದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿ ಕರ್ತವ್ಯ ಪ್ರಜ್ಞೆ ಮೆರೆದ ಕಾರ್ಯವನ್ನು ಕೊಲ್ಲಮೊಗ್ರ ಆಸ್ಪತ್ರೆ ವೈದ್ಯ ಡಾ. ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.