ನ್ಯೂಸ್ ನಾಟೌಟ್ : ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಮಿನಿ ವಿಧಾನಸೌಧಕ್ಕೆ ತೆರಳಿ ಚುನಾವಣಾಧಿಕಾರಿಗಳಿಗೆ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಯಿತು.ಬಸ್ ನಿಲ್ದಾಣದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗವಹಿಸಿದರು.
ಈ ಬಾರಿ ಸುಳ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟವಾಗಿತ್ತು.ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸತತ ಮೂರು ಬಾರಿ ಸ್ಪರ್ಧಿಸಿದ್ದ ಕಾಂಗ್ರೆಸ್ನ ಅಭ್ಯರ್ಥಿ ವೈದ್ಯರೂ ಆಗಿರುವ ಡಾ. ರಘು ಅವರು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಘೋಷಿಸಿತ್ತು. ಕೊಡಗಿನ ಎಚ್.ನಂದಕುಮಾರ್ ಸುಳ್ಯ ಬ್ಲಾಕ್ ಉಸ್ತುವಾರಿಯಾಗಿದ್ದು, ಅವರೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಂದೇ ನಂಬಲಾಗಿತ್ತು. ಆದರೆ ಕಾಂಗ್ರೆಸ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿ.ಕೃಷ್ಣಪ್ಪ ಎಂಬವರಿಗೆ ಟಿಕೆಟ್ ನೀಡಲಾಗಿತ್ತು. ಇದು ಸುಳ್ಯದ ಕೆಲ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ʼಯಾವ ಸರ್ವೆಯ ಆಧಾರದಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆಯೋ ಎಂಬುದು ನಮಗೆ ಗೊತ್ತಾಗಬೇಕು, ಮರು ಸರ್ವೆ ನಡೆಸಬೇಕುʼ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು.ಹಲವು ಬೆಳವಣಿಗೆಗಳ ಬಳಿಕ ಇದೀಗ ಇಂದು ಜಿ.ಕೃಷ್ಣಪ್ಪ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ.