ನ್ಯೂಸ್ ನಾಟೌಟ್ : ಹೊಸದಿಲ್ಲಿಗೆ ತೆರಳುತ್ತಿದ್ದ ಈಶಾನ್ಯ ಎಕ್ಸ್ಪ್ರೆಸ್ನ ಪ್ರಯಾಣಿಕನೊಬ್ಬ ರೈಲು ಚಲಿಸುತ್ತಿದ್ದ ವೇಲೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಸೋಮವಾರ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ವರದಿಯಾಗಿದೆ. ಈಶಾನ್ಯ ಎಕ್ಸ್ಪ್ರೆಸ್ ರೈಲಿನ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ, ಆ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ರಾತ್ರಿ 8 ಗಂಟೆ ಸುಮಾರಿಗೆ ರೈಲು ನ್ಯೂ ಜಲ್ಪೈಗುರಿ ನಿಲ್ದಾಣದ ಪ್ಲಾಟ್ಫಾರ್ಮ್ ನಂಬರ್ 3 ರ ಹೊರಗೆ ವ್ಯಕ್ತಿ ರೈಲಿನ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಗುಂಡು ಹಾರಿಸಿಕೊಂಡಿದ್ದಾನೆ. ಪೊಲೀಸರು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈಶಾನ್ಯ ಎಕ್ಸ್ಪ್ರೆಸ್ನ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ರೈಲು ಪ್ಲಾಟ್ಫಾರ್ಮ್ ಸಂಖ್ಯೆ 3 ರ ಹೊರಭಾಗದಲ್ಲಿದ್ದಇತರ ಪ್ರಯಾಣಿಕರಿಗೆ ಮೂರು ಸುತ್ತಿನ ಗುಂಡಿನ ಸದ್ದು ಕೇಳಿಸಿದೆ.
ಗುಂಡಿನ ಸದ್ದು ಕೇಳಿ ರೈಲಿನಲ್ಲಿದ್ದ ಪ್ರಯಾಣಿಕರು ಕೂಗಾಡಲು ಆರಂಭಿಸಿದಾಗ ಆರ್ಪಿಎಫ್ ಮತ್ತು ಜಿಆರ್ಪಿಯ ಹಿರಿಯ ಅಧಿಕಾರಿಗಳು ಕಂಪಾರ್ಟ್ಮೆಂಟ್ಗೆ ಧಾವಿಸಿದ್ದಾರೆ. ನಂತರ ಅಧಿಕಾರಿಗಳು ಆತನ ದೇಹವನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಸಹ-ಪ್ರಯಾಣಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವ್ಯಕ್ತಿಯು ತನ್ನ ಸ್ವಂತ ಚೀಲದಿಂದ ತೆಗೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಆತ ತನ್ನನ್ನು ತಾನೇ ಗುಂಡು ಹಾರಿಸಿಕೊಳ್ಳುವ ಮೊದಲು ಕೆಲವು ಅಸ್ವಾಭಾವಿಕ ನಡವಳಿಕೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡವನ ಬಗ್ಗೆ ಯಾವುದೇ ಟಿಕೆಟ್ ಅಥವಾ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ ಎಂದು ರೈಲ್ವೆ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.