ನ್ಯೂಸ್ ನಾಟೌಟ್: ಮುಂಬರುವ ವಿಧಾನಸಭೆ ಚುನಾವಣೆ ಸಮೀಪಕ್ಕೆ ಬರುತ್ತಿದ್ದಂತೆ ರಾಜಕೀಯ ವಲಯ ಗರಿಗೆದರಿದೆ, ಇದಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರ ಕೂಡ ಹೊರತಾಗಿಲ್ಲ ಅನ್ನುವುದು ವಿಶೇಷ.
ಪುತ್ತೂರಿನಲ್ಲಿ ಗೌಡ ಸಮುದಾಯದ ನಾಯಕ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಾರಿಯೂ ಅವಕಾಶ ಕೊಡಬೇಕೆಂದು ಒಕ್ಕಲಿಗ ಸಮುದಾಯದ ಗುಂಪೊಂದು ಪ್ರಬಲ ಆಕಾಂಕ್ಷೆಯನ್ನು ವ್ಯಕ್ತಪಡಿಸಿದೆ. ಮಾತ್ರವಲ್ಲ ಮಠಂದೂರು ಪರವಾಗಿ ಒಕ್ಕಲಿಗ ಗೌಡ ಸಂಘದ ನಿಯೋಗವೊಂದು ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ಮಾಡಿದೆ. ಈ ವಿಚಾರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಪುತ್ತೂರಿನಲ್ಲಿ ಒಕ್ಕಲಿಗ ಗೌಡ ಸಮುದಾಯದ ನಾಯಕರಾಗಿರುವ ಸಂಜೀವ ಮಠಂದೂರು ಅವರಿಗೆ ಈ ಭಾರಿಯೂ ಅಭ್ಯರ್ಥಿ ಸ್ಥಾನ ಸಿಗಬೇಕು. ಎಲ್ಲಾ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಎಲ್ಲರಿಗೂ ಆತ್ಮೀಯರು. ಜೊತೆಗೆ ಅವರ ನಾಯಕತ್ವದಿಂದ ಒಕ್ಕಲಿಗ ಗೌಡ ಸಮುದಾಯದಲ್ಲಿ ಅನೇಕ ಅಭಿವೃದ್ಧಿಪರ ಕಾರ್ಯಕ್ರಮ ನಡೆದಿದೆ. ಅವರನ್ನು ಬಿಟ್ಟು ಬೇರೆ ಯಾರಿಗೂ ಅಭ್ಯರ್ಥಿ ಸ್ಥಾನ ಕೊಡಬಾರದು ಎಂದು ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಂತರಿಕ ಲೆಕ್ಕಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಮನೋಹರ್ ಕಬಕ, ಗಗನ್ ಬೈಲಾಡಿ, ಕೌಶಿಕ್ ಸಹಿತ ಪುತ್ತೂರು ಮತ್ತು ಸುಳ್ಯದ ಹಲವಾರು ಮಂದಿ ಮುಖಂಡರು ಈ ಸಂದರ್ಭದಲ್ಲಿ ಸುದೀರ್ಘ ಚರ್ಚೆ ಮಾಡಿದ್ದಾರೆ. ಇದೇ ವೇಳೆ ಜಿಲ್ಲಾ ಒಕ್ಕಲಿಗರ ಸಂಘ ಯುವ ಘಟಕದ ಅಧ್ಯಕ್ಷರಾದ ಅಕ್ಷಯ್ ಕೆ.ಸಿ, ಸುಳ್ಯ ಗೌಡ ಸಂಘದ ನಿರ್ದೇಶಕರುಗಳಾದ ಡಾ ಜ್ಞಾನೇಶ್ ಎನ್ ಎ, ಡಾ. ಡಿ.ವಿ. ಲೀಲಾಧರ್ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.