ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಫೈನಲ್ ಹಂತಕ್ಕೆ ಬಂದು ತಲುಪಿದೆ ಎನ್ನಲಾಗಿದೆ. ಹಾಲಿ ಸಚಿವ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮಠಂದೂರಿಗೆ ಟಿಕೇಟ್ ಕೈ ತಪ್ಪುವ ಎಲ್ಲ ಸಾಧ್ಯತೆಗಳು ಕಂಡು ಬಂದವು. ಹಲವು ಹೊಸ ಹೆಸರುಗಳು ಕೂಡ ಬಿಜೆಪಿ ಹೈಕಮಾಂಡ್ ಎದುರಿನ ಪಟ್ಟಿಯಲ್ಲಿತ್ತು. ಮೂಲಗಳ ಪ್ರಕಾರ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ನಾಯಕರು ಪುತ್ತೂರಿನ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರ ಒಕ್ಕಲಿಗ, ಬಂಟ ಸಮುದಾಯ ಹಾಗೂ ಬ್ರಾಹ್ಮಣ ಸಮುದಾಯ ಮತದಾರರನ್ನು ಒಳಗೊಂಡಿದೆ. ಇದರಲ್ಲಿ ಒಕ್ಕಲಿಗ ಮತದಾರರು ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ಹೀಗಾಗಿ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಹೋಗುವಂತಹ ನಾಯಕನ ಆಯ್ಕೆಯನ್ನು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ಪುತ್ತೂರಿನಿಂದ ಮಠಂದೂರಿಗೆ ಪರ್ಯಾಯವಾಗಿ ಕೇಳಿ ಬಂದಿತ್ತು. ಇದೀಗ ಫೈನಲ್ ಆಗಿ ಸುಳ್ಯದ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಅವರಿಗೆ ಪುತ್ತೂರಿನಿಂದ ಟಿಕೇಟ್ ಸಿಗುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಹರೀಶ್ ಕಂಜಿಪಿಲಿ ಅವರನ್ನು ಮಾತನಾಡಿಸಿದಾಗ, ಟಿಕೇಟ್ ಸಿಗುವ ಬಗ್ಗೆ ಹಲವರು ನನ್ನ ಬಳಿ ಫೋನ್ ಮೂಲಕ ಕೇಳುತ್ತಿದ್ದಾರೆ. ಆದರೆ ಹೈಕಮಾಂಡ್ನಿಂದ ನನಗೆ ಯಾವ ಕರೆಯೂ ಬಂದಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅಶ್ಲೀಲ ಭಂಗಿಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಂಜೀವ ಮಠಂದೂರು ಅವರಿಗೆ ಪುತ್ತೂರಿನಲ್ಲಿ ತೀವ್ರ ಹಿನ್ನಡೆಯಾಗಿದೆ. ಅನಾಯಾಸವಾಗಿ ಟಿಕೇಟ್ ಗಿಟ್ಟಿಸಿಕೊಳ್ಳಬೇಕಾಗಿದ್ದ ಮಠಂದೂರು ಫೋಟೋ ಲೀಕ್ ಆಗುತ್ತಿದ್ದಂತೆ ತಮ್ಮ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ. ಹೀಗಿದ್ದರೂ ಕೂಡ ಟಿಕೇಟ್ ಪಡೆದುಕೊಳ್ಳಲು ಅವರು ಸರ್ವ ರೀತಿಯ ಪ್ರಯತ್ನವನ್ನು ಪಪಡುತ್ತಲೇ ಇದ್ದಾರೆ ಅನ್ನುವಂತಹ ಮಾಹಿತಿಗಳು ಕೂಡ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.
ಸದ್ಯ ಪುತ್ತೂರು ಮತ್ತು ಸುಳ್ಯ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳೀನ್ ಕುಮಾರ್ ಕಟೀಲ್ ತೀರ್ಮಾನವೇ ಅಂತಿಮ ಅನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿದೆ. ಅವರಿಗೆ ಆಪ್ತರಾಗಿರುವವರಿಗೆ ಟಿಕೇಟ್ ಸಿಗುವ ಸಾಧ್ಯತೆಗಳು ಇವೆ. ಹೀಗಾಗಿ ಯಾರಿಗೆ ಪುತ್ತೂರಿನ ಅದೃಷ್ಟದ ಟಿಕೇಟ್ ಒಲಿಯಬಹುದು ಅನ್ನುವಂತಹ ಕುತೂಹಲ ತೀವ್ರವಾಗಿದೆ.