ನ್ಯೂಸ್ ನಾಟೌಟ್ : ಕುತೂಹಲ ಮೂಡಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗ್ಲೆ ಆಶಾ ತಿಮ್ಮಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ.ಕಾಂಗ್ರೆಸ್ ನಲ್ಲಿ ಟಿಕೇಟ್ ಆಕಾಂಕ್ಷಿಗಳಿದ್ದರೂ ನಾಲ್ಕೈದು ಮಂದಿಯ ಹೆಸರು ಮುಂಚೂಣಿಯಲ್ಲಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಕೂಡ ಒಬ್ಬರಾಗಿದ್ದರು.ಅವರೀಗ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಬೆಂಗಳೂರು ಜೆಪಿ ನಗರದಲ್ಲಿ ಸಮಾರಂಭ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಹಲವು ನಾಯಕರ ಜೊತೆ ದಿವ್ಯ ಪ್ರಭಾ ಗೌಡ ಅವರು ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.ದಿವ್ಯ ಪ್ರಭಾ ಗೌಡ ಅವರು ಮೂರು ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿಯೂ ಟಿಕೆಟ್ ಬಯಸಿದ್ದರೂ ಅವರಿಗೆ ಟಿಕೆಟ್ ಸಿಗದೇ ಇರುವ ಹಿನ್ನೆಲೆಯಲ್ಲಿ ಮತ್ತು ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಜೆಡಿಎಸ್ ಸರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ. ದಿವ್ಯ ಪ್ರಭಾ ಅವರು ಜೆಡಿಎಸ್ ಸೇರ್ಪಡೆಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.