ನ್ಯೂಸ್ ನಾಟೌಟ್ : ಈ ವರ್ಷದ ಕಾಂಟ್ರವರ್ಸಿಗೆ ಗುರಿಯಾದ ಸಿನಿಮಾಗಳಲ್ಲಿ ಪಠಾಣ್ ಚಿತ್ರ ಕೂಡ ಒಂದು.ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಚಿತ್ರಕ್ಕೆ ಪರ ವಿರೋಧದ ಚರ್ಚೆಗಳು ಕೇಳಿ ಬಂದಿದ್ದವು.ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ನಟಿ ದೀಪಿಕಾ ಪಡುಕೋಣೆ ಹಾಗೂ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಶಾರುಖ್ ಖಾನ್ ಇವರಿಬ್ಬರ ಕ್ಯೂಟ್ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು. ಇದಾದ ಬಳಿಕ ಚೆನ್ನೈ ಎಕ್ಸ್ ಪ್ರೆಸ್, ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಅಭಿನಯಿಸಿದರು. ಇದೀಗ ಬಹಳ ವರ್ಷಗಳ ಬಳಿಕ ಪಠಾಣ್ ಮೂವಿಯಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ.
ಸದ್ಯ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಸೂಪರ್ ಹಿಟ್ ಆಗಿದೆ. ವಿಶ್ವದಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಈ ಸಿನಿಮಾದ ಬಿಡುಗಡೆಗೂ ಮುನ್ನ ಬಾರಿ ವಿವಾದಕ್ಕೂ ಗುರಿಯಾಗಿತ್ತು. ಒಂದು ವರ್ಗದ ನೆಟ್ಟಿಗರು ಬಹಿಷ್ಕಾರ ಮಾಡಲು ಮುಂದಾಗಿದ್ದರು. ಅದಕ್ಕೆ ಕಾರಣ ಆಗಿದ್ದು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ. ಈ ಬಿಕಿನಿ ಧರಿಸಿ ‘ಬೇಷರಂ ರಂಗ್..’ ಎಂದು ದೀಪಿಕಾ ಹಾಡಿ ಕುಣಿದಿದ್ದನ್ನು ಕೆಲವು ಹಿಂದೂ ಪರ ಸಂಘಟನೆಗಳು ವಿರೋಧಿಸಿದ್ದವು. ಅಷ್ಟಕ್ಕೂ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ದೀಪಿಕಾ ಪಡುಕೋಣೆಗೆ ಕೇಸರಿ ಬಣ್ಣದ ಬಿಕಿನಿ ಧರಿಸುವಂತೆ ಸೂಚಿಸಿದ್ದು ಯಾಕೆ? ಈ ಬಗ್ಗೆ ಮಾತನಾಡಿದ್ದಾರೆ.
‘ನ್ಯೂಸ್18 ರೈಸಿಂಗ್ ಇಂಡಿಯಾ ಸಮಿಟ್ 2023’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾರ್ಥ್ ಆನಂದ್ ಅವರು ಬಿಕಿನಿ ಕಾಂಟ್ರವರ್ಸಿ ಬಗ್ಗೆ ಉತ್ತರಿಸಿದ್ದಾರೆ. ಈ ಚಿತ್ರದ ಕಾಸ್ಟ್ಯೂಮ್ ಬಗ್ಗೆ ಯೋಚನೆ ಮಾಡುವುದಕ್ಕು ಮುನ್ನ ನಾವು ಹಾಗೇ ಸುಮ್ಮನೆ ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿದೆವು. ಆ ಬಗ್ಗೆ ಹೆಚ್ಚೇನೂ ಯೋಚಿಸಿರಲಿಲ್ಲ. ನೋಡ ನೋಡುತ್ತಿದ್ದಂತೆ ಸೂರ್ಯನ ಬೆಳಕಿಗೆ , ಹಚ್ಚ ಹಸಿರಾದ ಹುಲ್ಲಿಗೆ, ನೀಲಿಯಾದ ನೀರಿಗೆ ಕೇಸರಿ ಬಣ್ಣ ತುಂಬ ಚೆನ್ನಾಗಿ ಕಾಣುತ್ತಿತ್ತು. ತೆರೆ ಮೇಲೆ ಅದನ್ನು ನೋಡಿದಾಗ ನಮ್ಮ ಪ್ರೇಕ್ಷಕರಿಗೆ ಅರ್ಥ ಆಗುತ್ತದೆ ಅಂತ ನಾವು ಅಂದುಕೊಂಡಿದ್ದೆವು ಎಂದು ಸಿದ್ದಾರ್ಥ್ ಆನಂದ್ ಹೇಳಿದ್ದಾರೆ.
ಬಿಡುಗಡೆಗೂ ಮುನ್ನ ಭಾರೀ ವಿರೋಧದ ಮಾತುಗಳು ಕೇಳಿ ಬಂದರೂ ಕೂಡ ‘ಪಠಾಣ್’ ಸಿನಿಮಾದಲ್ಲಿ ಕೇಸರಿ ಬಿಕಿನಿ ದೃಶ್ಯಕ್ಕೆ ನಿರ್ದೇಶಕರು ಕತ್ತರಿ ಹಾಕದೇ ಅದನ್ನೇ ಮುಂದುವರಿಸಿದರು.ಇದು ರಾಷ್ಟ್ರ ಭಕ್ತಿ ಕಥಾಹಂದರದ ಸಿನಿಮಾವಾದ್ದರಿಂದ ಜನರು ಸಖತ್ ಬೆಂಬಲ ವ್ಯಕ್ತಪಡಿಸಿದರು. ಅಂತಿಮವಾಗಿ ‘ಪಠಾಣ್’ ಸಿನಿಮಾಗೆ ಜನರ ರೆಸ್ಪನ್ಸ್ ಸಿಕ್ಕಿತು ಎಂದು ನಿರ್ದೇಶಕರು ತಿಳಿಸಿದ್ದಾರೆ.