ನ್ಯೂಸ್ ನಾಟೌಟ್ : ಮಧ್ಯಪ್ರದೇಶದ ಸಿಂಗ್ಪುರ ರೈಲು ನಿಲ್ದಾಣದ ಬಳಿ ಬುಧವಾರ ಎರಡು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಓರ್ವ ಚಾಲಕ ಮೃತಪಟ್ಟಿದ್ದು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದಾರೆ. ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ರೈಲುಗಳ ಇಂಜಿನ್ಗಳು ಬೆಂಕಿಗೆ ಆಹುತಿಯಾಗಿ ಬೋಗಿಗಳು ಪಲ್ಟಿಯಾಗಿವೆ.
ಇಬ್ಬರು ರೈಲ್ವೇ ಕಾರ್ಮಿಕರು ಬೋಗಿಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ಬಿಲಾಸ್ಪುರದಿಂದ ಕಟ್ನಿ ರೈಲು ಮಾರ್ಗದಲ್ಲಿ ಶಾಹದೋಲ್ಗೆ 10 ಕಿಮೀ ಮೊದಲು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಬಳಿಕ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ಇಂಜಿನ್ ಮೇಲೆ ಇನ್ನೊಂದು ರೈಲಿನ ಇಂಜಿನ್ ಬಿದ್ದಿದೆ ಎಂದು ವರದಿ ತಿಳಿಸಿದೆ.
ಬೆಳಗ್ಗೆ 6:30ಕ್ಕೆ ಅಪಘಾತ ಸಂಭವಿಸಿದ್ದು, ರೈಲ್ವೇ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಅಪಘಾತದ ನಂತರ, ಬಿಲಾಸ್ಪುರ-ಕಟ್ನಿ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.