ನ್ಯೂಸ್ ನಾಟೌಟ್: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಮತ್ತು ಇತರ ತರಬೇತುದಾರರ ವಿರುದ್ಧ ಈ ವರ್ಷದ ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದ ಭಾರತದ ಕುಸ್ತಿಪಟುಗಳು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ.
ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವಾರು ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಭಾರತದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಕೆ ಕರೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಾರಿ, ಬಿಜೆಪಿ, ಕಾಂಗ್ರೆಸ್, ಎಎಪಿ, ಅಥವಾ ಯಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಎಲ್ಲಾ ಪಕ್ಷಗಳಿಗೆ ಸ್ವಾಗತವಿದೆ. ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರು ಹೇಳಿದ್ದಾರೆ.
ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕುಸ್ತಿಪಟುಗಳ ಆರೋಪಿಸಿದ್ದಾರೆ.
ಹೀಗಾಗಿ ಕುಸ್ತಿಪಟುಗಳು ಮರಳಿ ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದ್ದಾರೆ. ಆಶ್ವಾಸನೆ ನೀಡಿದ್ದರಿಂದ ನಾವು ಜನವರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೆವು. ಅದು ಸುಳ್ಳು ಆಶ್ವಾಸನೆಯಾಗಿತ್ತು. ಈ ಬಾರಿ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ವಿಚಾರವಾಗಿ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ವಿನೇಶ್ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.