ನ್ಯೂಸ್ ನಾಟೌಟ್: ಮೀನು ಕೆಲವರ ಅಚ್ಚುಮೆಚ್ಚಿನ ಆಹಾರವಾಗಿದೆ. ಕರಾವಳಿ ಭಾಗದ ಜನರು ವಿವಿಧ ರೀತಿಯ ಮೀನಿನ ಖಾದ್ಯಗಳನ್ನು ರುಚಿ ರುಚಿಯಾಗಿ ತಯಾರಿಸಿ ತಿನ್ನುತ್ತಾರೆ. ಆದರೆ ಎಲ್ಲಾ ಮೀನುಗಳನ್ನು ತಿನ್ನುವ ಮೊದಲು ಮೀನಿನ ಬಗ್ಗೆ ನಿಮಗೆ ತಿಳಿದಿರಲಿ. ಇಲ್ಲೊಬ್ಬರು ಮಹಿಳೆ ಮೀನೊಂದನ್ನು ಸೇವಿಸಿ ಮೃತಪಟ್ಟು, ಆಕೆಯ ಪತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
ಏನಿದು ಘಟನೆ?
ಮಾ. 25 ರಂದು ವೃದ್ಧ ದಂಪತಿ ಮಲೇಷ್ಯಾದ ಜೋಹರ್ ನಲ್ಲಿರುವ ಸ್ಥಳೀಯ ಅಂಗಡಿಯೊಂದರಿಂದ ‘ಪಫರ್’ ಎಂಬ ಮೀನನ್ನು ಖರೀದಿಸಿದ್ದಾರೆ. ಈ ಮೀನು ಕೆಲ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಈ ಮೀನಿನ ವಿಷವನ್ನು ಅನುಭವಿ ಚೆಫ್ ಗಳು ಜಾಗ್ರತೆಯಿಂದ ತೆಗೆದು ಅದರ ಪದಾರ್ಥವನ್ನು ಮಾಡುತ್ತಾರೆ.
ಆದರೆ ಇವರಿಗೆ ಇದು ತಿಳಿದಿರಲಿಲ್ಲ. ಮನೆಗೆ ಮೀನನ್ನು ತಂದ 88 ವರ್ಷದ ಲಿಮ್ ಸಿವ್ ಗುವಾನ್ ಮೀನು ಸೇವಿಸಿದ ಬಳಿಕ ಉಸಿರಾಟದ ತೊಂದರೆಗಳನ್ನು ಅನುಭವಿಸಿದ್ದಾರೆ. ಆಕೆಯ ಪತಿಗೆ ಕೂಡ ಒಂದು ಗಂಟೆಯ ನಂತರ ಇದೇ ರೀತಿಯ ಸಮಸ್ಯೆಗಳು ಶುರುವಾಗಿದೆ. ಕೂಡಲೆ ಆಸ್ಪತ್ರೆಗೆ ದಾಖಲಾದರು ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಆಕೆಯ ಪತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಕೋಮಾದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಆಹಾರ ಮತ್ತು ಔಷಧ ಆಡಳಿತ ಈ ಬಗ್ಗೆ ಮಾತನಾಡಿದ್ದು, ಜಪಾನಿನ ಜನಪ್ರಿಯ ಆಹಾರದಲ್ಲಿ ಪಫರ್ ಮೀನು ಕೂಡ ಒಂದು. ಈ ಮೀನು ಪ್ರಬಲವಾದ ಮತ್ತು ಮಾರಣಾಂತಿಕ ವಿಷಗಳಾದ ಟೆಟ್ರೋಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಗಳನ್ನು ಒಳಗೊಂಡಿದೆ. ಈ ಮೀನನ್ನು ಅನುಭವಿ ಚೆಫ್ ಗಳು ಸರಿಯಾಗಿ ಕ್ಲೀನ್ ಮಾಡಿದ ಬಳಿಕವಷ್ಟೇ ಬಳಸಬೇಕು ಎಂದು ತಿಳಿಸಿದ್ದಾರೆ.