ನ್ಯೂಸ್ ನಾಟೌಟ್ : ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದೆ.ಪೇಟೆಯ ಎರಡೂ ಬದಿಯೂ ಇರುವ ಡ್ರೈನೇಜ್ಗೆ ಕಾಂಕ್ರಿಟ್ ತಡೆಗೋಡೆ ಮಾಡಿ ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆಯಾದರೂ ಅಲ್ಲಲ್ಲಿ ಡ್ರೈನೇಜ್ ಮುಚ್ಚದೇ ಓಪನ್ ಬಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.ಇದರ ಬೆನ್ನಲ್ಲೆ ಇದೀಗ ವೃದ್ದರೊಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಡ್ರೈನೇಜ್ ಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ನೆಲ್ಯಾಡಿ ಗ್ರಾಮದ ಕುರುಬರಕೇರಿ ನಿವಾಸಿ ಬಾಬು (65ವ.) ಗಂಭೀರ ಗಾಯಗೊಂಡವರು.
ಈ ಹಿಂದೆ ವಿಪರೀತ ಧೂಳಿನಿಂದಾಗಿ ಕಂಗೆಟ್ಟಿದ್ದ ನೆಲ್ಯಾಡಿ ಜನತೆ ಇದೀಗ ಅಲ್ಲಲ್ಲಿ ಓಪನ್ ಆಗಿರುವ ಡ್ರೈನೇಜ್ ಮುಚ್ಚದೇ ಬಿಟ್ಟಿರುವುದರಿಂದ ತೊಂದರೆಗೊಳಗಾಗಿದ್ದಾರೆ.ಅದರಲ್ಲೂ ವೃದ್ದರು,ಮಕ್ಕಳು ಈ ದಾರಿಯಲ್ಲಿ ಸಾಗಿ ಬಂದರೆ ಅಪಾಯವೇ ಹೆಚ್ಚು.ಘಟನೆಯಲ್ಲಿ ಗಾಯಗೊಂಡಿರುವ ಬಾಬು ಅವರು ಡ್ರೈನೇಜ್ ಸ್ಲ್ಯಾಬ್ ಮೇಲೆ ನಡೆದುಕೊಂಡು ಬಂದವರು ನೆಲ್ಯಾಡಿ ಸೂರ್ಯ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾಮಗಾರಿಯ ಗುತ್ತಿಗೆದಾರರು ಅಗಲವಾದ ಗುಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸದೇ ಇರುವುದು ಅರಿವಿಗೆ ಬಾರದೇ ಆಕಸ್ಮಿಕವಾಗಿ ಡ್ರೈನೇಜ್ ಒಳಕ್ಕೆ ಬಿದ್ದಿದ್ದಾರೆ.
ಸುಮಾರು ನಾಲ್ಕೈದು ಅಡಿ ಆಳ ಇರುವ ಗುಂಡಿಗೆ ಬಿದ್ದ ಪರಿಣಾಮ ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬಾಬು ಅವರನ್ನು ಸ್ಥಳೀಯರು ಮೇಲಕ್ಕೆತ್ತಿ ಉಪಚರಿಸಿದ್ದಾರೆ.ನಂತರ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಇದೀಗ ಅವರಿಗೆ ಚಿಕಿತ್ಸೆ ನೀಡಲಾಗಿದೆ.ಎರಡು ದಿನದ ಹಿಂದೆ ಇದೆ ಹೊಂಡಕ್ಕೆ ಇನ್ನೊಬ್ಬರು ಬಿದ್ದು ಗಾಯಗೊಂಡ ಘಟನೆಯೂ ನಡೆದಿತ್ತು ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.