ನ್ಯೂಸ್ ನಾಟೌಟ್ : ಮಕ್ಕಳಿಲ್ಲ ಅಂತ ಕೊರಗುವವರನ್ನು ನೋಡಿದ್ದೇವೆ.ಅವರು ದೇವಸ್ಥಾನಗಳಿಗೆ ಹೋಗಿ ಹರಕೆ ಕಟ್ಟಿಕೊಂಡವರನ್ನು,ಆಸ್ಪತ್ರೆಗೆ ಸುತ್ತಾಡುವವರನ್ನು ನೋಡಿದ್ದೇವೆ.ಆದರೆ ಇಲ್ಲೊಬ್ಬಳು ತಾಯಿಯಿದ್ದಾಳೆ.ಆಗ ತಾನೆ ಜನಿಸಿದ ಮಗುವನ್ನು ಮಾರಾಟ ಮಾಡಿದ್ದಾಳೆ.
ಈ ಘಟನೆ ಜಾರ್ಖಂಡ್ನ ಛತ್ರಾ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿಯಲ್ಲದೆ, ಈ ಪ್ರಕರಣ ಬೆಳಕಿಗೆ ಬಂದನಂತರ ಸುಮಾರು 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆಶಾ ದೇವಿ ಎಂಬ ಮಹಿಳೆ ತನ್ನ ಶಿಶುವನ್ನು 4.5 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮಗುವಿನ ಮಾರಾಟದ ಬಗ್ಗೆ ಮಾಹಿತಿ ಪಡೆದ ನಂತರ ನಾವು ಕಾರ್ಯಾಚರಣೆ ನಡೆಸಿ 24 ಗಂಟೆಗಳಲ್ಲಿ ಬೊಕಾರೊ ಜಿಲ್ಲೆಯಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದೆವು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಮಗುವನ್ನು ಹೆತ್ತ ತಾಯಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದ ವೈದ್ಯರು ಜಿಲ್ಲಾಧಿಕಾರಿಗೆ ವಿಷಯ ಮುಟ್ಟಿಸಿದ್ದಾರೆ. ಡಿಸಿ ಪೊಲೀಸರಿಗೆ ಸೂಚನೆ ನೀಡಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಮಗುವನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿ, ಆಕೆಯ ಬಳಿಯಿದ್ದ 1 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಆಕೆ ನೀಡಿದ ಮಾಹಿತಿ ಆಧಾರದ ಮೇಲೆ ಮಗು ಖರೀದಿಸಿದ್ದ ಡಿಂಪಲ್ ದೇವಿ ಎಂಬುವವರನ್ನು ಬಂಧಿಸಿದೆವು. ಡಿಂಪಲ್ ದೇವಿ ನೀಡಿದ ಕೆಲವು ಮಾಹಿತಿ ಆಧರಿಸಿ ಉಳಿದ 11 ಆರೋಪಿಗಳನ್ನು ಬಂಧಿಸಲಾಯಿತು. ಬೊಕಾರೊದಲ್ಲಿದ್ದ ಮಗುವನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ಅವಿನಾಶ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.