ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಖ್ಯಾತ ರಾಜಕೀಯ ವ್ಯಕ್ತಿಗಳ ಫೋಟೋಗಳನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡಲು ಆ ಚಿತ್ರಗಳನ್ನು ಬಳಸಿದ ಆರೋಪದ ಮೇಲೆ ಜಾರ್ಖಂಡ್ನ ರಾಂಚಿಯ ವ್ಯಕ್ತಿಯನ್ನು ಪುಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಯನ್ನು ಶಮೀಮ್ ಜಾವೇದ್ ಅನ್ಸಾರಿ (20) ಎಂದು ಗುರುತಿಸಲಾಗಿದ್ದು, ಪುಣೆಯ ಪಿಂಪ್ರಿ-ಚಿಂಚ್ವಾಡ್ನ ನಿಗ್ಡಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಂಸದರೊಬ್ಬರು ಎಫ್ಐಆರ್ ದಾಖಲಿಸಿದ ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಎಫ್ಐಆರ್ ಪ್ರಕಾರ, ಅನ್ಸಾರಿ ಫೋಟೋಗಳನ್ನು ವಿರೂಪವಾಗಿ ಎಡಿಟ್ ಮಾಡಿದ್ದಾರೆ ಎನ್ನಲಾಗಿದೆ.
ಆ ಚಿತ್ರಗಳನ್ನು ಆಕ್ಷೇಪಾರ್ಹ ವೀಡಿಯೊಗಳನ್ನು ತಯಾರಿಸಲು ಬಳಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಖಚಿತಪಡಿಸಿದರು ಮತ್ತು ನಂತರ ಪುಣೆ ಪೊಲೀಸರು ಅವರನ್ನು ಟ್ರಾನ್ಸಿಟ್ ರಿಮಾಂಡ್ನಲ್ಲಿ ಮಹಾರಾಷ್ಟ್ರಕ್ಕೆ ಕರೆದೊಯ್ದರು ಎಂದು ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 295ಎ, 505(1)/153(4) ಮತ್ತು ಐಟಿ ಕಾಯ್ದೆಯ 67/67(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.