ನ್ಯೂಸ್ನಾಟೌಟ್: ಚುನಾವಣಾ ಪ್ರಚಾರಕ್ಕಾಗಿ ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮೇ 3ರಂದು ಮೂಲ್ಕಿಯಲ್ಲಿ ಮೋದಿ ಪ್ರಚಾರ ಸಭೆ ನಡೆಸಲಿದ್ದಾರೆ. ಮೇ 6ರಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವು ಹಿಂದುತ್ವದ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಅದರ ಆಧಾರದಲ್ಲಿ ಪುತ್ತೂರು ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕರಾವಳಿ ಜಿಲ್ಲೆಗಳ 19 ಕ್ಷೇತ್ರಗಳಲ್ಲಿ ಎಲ್ಲವನ್ನೂ ಬಿಜೆಪಿ ಗೆಲ್ಲುತ್ತದೆ ಎಂದರು.
ಎಪ್ರಿಲ್ 25 ಮತ್ತು 26ರಂದು ರಾಜ್ಯದಾದ್ಯಂತ ಮಹಾ ಪ್ರಚಾರ ಅಭಿಯಾನ ನಡೆಸಲಾಗುವುದು. ಏಕಕಾಲದಲ್ಲಿ 224 ಕ್ಷೇತ್ರಗಳಲ್ಲಿ ನಡೆಯುವ ಅಭಿಯಾನದಲ್ಲಿ 98 ಮಂದಿ ಕೇಂದ್ರ ನಾಯಕರು, 150 ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಜೆಪಿ ನಡ್ಡಾ ಅಮಿತ್ ಷಾ ರಾಜನಾಥ್ ಸಿಂಗ್, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತರಾಮನ್, ಮನ್ ಸುಖ್ ಮಾಂಡವೀಯ, ಕೆ.ಅಣ್ಣಾಮಲೈ, ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಸ್ಮೃತಿ ಇರಾನಿ ಮತ್ತಿತರರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.
ಬಂಡಾಯ ಎದ್ದವರ ಕುರಿತ ಪ್ರಶ್ನೆಗೆ ಉತ್ತರಿಸಿದ ಕೋಟ, ಪಕ್ಷದಲ್ಲಿ ಬಂಡಾಯ ಹೋದವರು ಮರಳಿ ನಮ್ಮ ಜೊತೆ ಸೇರುವ ವಿಶ್ವಾಸ ಇದೆ. ಯಾವುದೇ ಬಂಡಾಯ ಇಲ್ಲ ಎಂದರು. ವಿಧಾನಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.