ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬುಧವಾರ ಬೆಳಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಾಗುವುದು. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.
ನನ್ನ ಮೂಲ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಕ್ಕೆ ನಾನು ಬದ್ಧ. ಪರಿಷತ್ ಸದಸ್ಯನಾಗಿ ಎಲ್ಲಾ ವರ್ಗದ ಪರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗಿಲ್ಲ. ಹಾಗಾಗಿ ಕಾನೂನು ಸಿದ್ಧವಾಗುವ ಕೆಳಮನೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದೇನೆ ಎಂದರು.
ಎಲ್ಲಾ ಸೌಕರ್ಯಗಳು ಇದ್ದರೂ ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆಗೆ ಯಾರು ಮುಂದೆ ಬರುತ್ತಿಲ್ಲ. ಈ ಎಲ್ಲಾ ಕಾರಣಕ್ಕಾಗಿ ಸ್ಪರ್ಧೆ ಅನಿವಾರ್ಯವಾಗಿದೆ. ಟಿಕೆಟ್ ಗೋಸ್ಕರ ನಾನು ಪಕ್ಷ ಬಿಡುತ್ತಿಲ್ಲ. ನಾನು ನನ್ನ ಗುರಿ ಸಾಧನೆಗಾಗಿ ಹೊರಬರುತ್ತಿದ್ದೇನೆ ಎಂದರು. ನಾನು ಹುಟ್ಟಿರುವುದೇ ದೀಪಾವಳಿಯ ಅಮಾವಾಸ್ಯೆ ದಿನ. ಹಾಗಾಗಿ ನಾಳೆ ಅಮಾವಾಸ್ಯೆ ಇದ್ದರೂ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ತಿಳಿಸಿದರು.