ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಲು ಪಿಯುಸಿ ಮಾರ್ಕ್ಸ್ ಮಾನದಂಡ ವಾಗಿಸಿಕೊಂಡಿದ್ದು ವಿಶೇಷವಾಗಿದೆ. ಮನೆ ಬಾಡಿಗೆ ಪಡೆಯುವ ಮುನ್ನ ಆಹಾರ ಪದ್ಧತಿ, ಜಾತಿ, ವಿವಾಹಿತರು ಹೌದೋ, ಅಲ್ಲವೋ ಎಂದು ಕೇಳುವುದು ಸಾಮಾನ್ಯ ಆದರೆ ಈತ ಶೇ.90 ಅಂಕ ಪಡೆದಿದ್ದರೆ ಮಾತ್ರ ಮನೆ ಬಾಡಿಗೆಗೆ ನೀಡುವುದಾಗಿ ಷರತ್ತು ಹಾಕಿದ್ದಾನೆ ಎನ್ನಲಾಗಿದೆ.
“ಶುಭ್” ಹೆಸರಿನ ಟ್ವಿಟರ್ ಖಾತೆದಾರರೊಬ್ಬರು ತಮ್ಮ ಸಂಬಂಧಿಕರೊಬ್ಬರು ಬೆಂಗಳೂರಿನಲ್ಲಿ ಮನೆ ಹುಡುಕಲು ನಡೆಸಿದ ಪರದಾಟದ ಮೆಸೇಜ್ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಡಿಗೆದಾರರು ಮಧ್ಯವರ್ತಿಯೊಬ್ಬರಿಗೆ ಮನೆ ಹುಡುಕಲು ತಿಳಿಸಿದ್ದು, ಮಧ್ಯವರ್ತಿ ಬಾಡಿಗೆದಾರರ ಜಾಲತಾಣ ಮಾಹಿತಿ ಹಾಗೂ ಪಿಯುಸಿ ಮಾರ್ಕ್ಸ್ ಕಾರ್ಡ್ ಹಂಚಿಕೊಳ್ಳಲು ಕೇಳಿದ್ದಾರೆ.
ಬಳಿಕ ಮನೆಯ ಮಾಲೀಕರಿಗೆ ನೀವು ಪಿಯುಸಿಯಲ್ಲಿ ಪಡೆದ ಶೇ.75ರ ಅಂಕ ತೃಪ್ತಿ ತಂದಿಲ್ಲವಂತೆ, ಇಲ್ಲಿ ಮನೆ ಬಾಡಿಗೆ ಪಡೆಯಲು ಕನಿಷ್ಠ ಶೇ.90 ಅಂಕ ಪಡೆದಿರಬೇಕಿತ್ತು ಎಂದು ತಿಳಿಸಿ ಮನೆ ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಮಧ್ಯವರ್ತಿ ತಿಳಿಸಿದ್ದಾರೆ.
ಈ ವಿಚಾರವೀಗ ವೈರಲ್ ಆಗಿದ್ದು, ಬಾಡಿಗೆ ಮನೆಗೂ ಅಂಕಪಟ್ಟಿ ಬೇಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.