ನ್ಯೂಸ್ ನಾಟೌಟ್ : ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಇತಿಹಾಸ ಪ್ರಸಿದ್ಧವಾದ ಕ್ಷೇತ್ರ. ಮುಸ್ಲಿಂ ಸಮುದಾಯದ ಬಪ್ಪ ಬ್ಯಾರಿ ನಿರ್ಮಿಸಿದ ದೇವಸ್ಥಾನ ಎಂಬ ಐತಿಹ್ಯ ಹೊಂದಿದೆ. ಆದರೆ ಇದೀಗ ಈ ದೇವಸ್ಥಾನದಲ್ಲಿ ಹಿಂದುಯೇತರರ ವ್ಯಾಪಾರಕ್ಕೆ ನಿರ್ಬಂಧ ಹೇರಿ, ಬ್ಯಾನರ್ ಹಾಕಲಾಗಿದ್ದು ಬಾರಿ ಸುದ್ದಿಯಾಗಿದೆ. ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ದೇಗುಲ ಪರಿಸರದಲ್ಲಿ ನಿಷೇಧ ವಿಧಿಸಲಾಗಿದ್ದು, ಧಾರ್ಮಿಕ ಸೌಹಾರ್ದ ಕೆಡಿಸುವ ಯತ್ನ ಎಂಬ ಮಾತುಗಳು ಕೇಳಿ ಬಂದಿವೆ.
ಎಪ್ರಿಲ್ 11ರಂದು ಬಪ್ಪನಾಡು ದೇವಸ್ಥಾನದಲ್ಲಿ ಹಗಲು ರಥೋತ್ಸವ ನಡೆಯಲಿದ್ದು, ಈ ವೇಳೆ ಭಕ್ತರು ದೇವರ ಶಯನಕ್ಕೆ ಮಲ್ಲಿಗೆಯ ಹರಕೆಯನ್ನು ತೀರಿಸುವ ಸಂಪ್ರದಾಯವಿದೆ.ಇಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಲ್ಲಿಗೆ ಹೂ ಮಾರಾಟವಾಗುವುದು ವಿಶೇಷವೆಂಬಂತಿದೆ. ಹಿಂದಿನಿಂದಲೂ ಇಲ್ಲಿ ಮುಸ್ಲಿಂ ಹಾಗೂ ಹಿಂದು ವ್ಯಾಪಾರಿಗಳು ಜೊತೆಯಾಗಿಯೇ ಮಲ್ಲಿಗೆ ವ್ಯಾಪಾರವನ್ನು ಮಾಡುತ್ತಾ ಬರುತ್ತಿದ್ದರು. ಮಾತ್ರವಲ್ಲ ಇನ್ನಿತರ ವ್ಯಾಪಾರವನ್ನು ಕೂಡ ನಡೆಸುತ್ತ ಬಂದಿದ್ದರು.
ಈ ವರ್ಷ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಹಿಂದುತ್ವ ಸಂಘಟನೆಗಳಿಂದ ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥರು ಮತ್ತು ಅನುವಂಶಿಕ ಮುಖ್ಯಸ್ಥರಿಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸುವಂತೆ ಮನವಿ ಮಾಡಿದ್ದಾರೆ. ಧಾರ್ಮಿಕ ದತ್ತಿ ಕಾನೂನಿನ ಪ್ರಕಾರ ಅನ್ಯ ಮತೀಯರಿಗೆ ಅವಕಾಶ ಕೊಡದಂತೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ ಸಘಂಟನೆಗಳ ಮನವಿಯಂತೆ ಈ ಬಾರಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ವ್ಯಾಪಾರಕ್ಕೆ ಅನುಮತಿ ಕೇಳಿಕೊಂಡು ಬಂದಿದ್ದ ಮುಸ್ಲಿಂ ವ್ಯಾಪಾರಿಗಳನ್ನು ದೇವಾಲಯದ ಆಡಳಿತ ಮಂಡಳಿ ವಾಪಾಸ್ ಕಳುಹಿಸಿದೆ. ಈ ಮೂಲಕ ಈ ಬಾರಿಯ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿ ಅಧಿಕೃತವಾಗಿ ಮುಸ್ಲಿಂ ವ್ಯಾಪಾರಿಗಳನ್ನು ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.
ಕಳೆದ ವರ್ಷ ಇಡೀ ರಾಜ್ಯದಾದ್ಯಂತ ಹಿಜಾಬ್ ಗಲಾಟೆ ಜೋರಾದ ಪರಿಣಾಮ ಮುಜರಾಯಿ ಇಲಾಖೆ ದೇವಸ್ಥಾನ ಪರಿಸರದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ದೂರ ಇಡಬೇಕೆಂದು ಹಿಂದು ಸಂಘಟನೆಗಳು ಆಗ್ರಹಿಸಿದ್ದವು.ಇದೇ ರೀತಿ ಕಳೆದ ವರ್ಷವೂ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಗೂ ಮುಸ್ಲಿಂ ವ್ಯಾಪಾರಕ್ಕೆ ನಿಷೇಧಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಇದನ್ನು ನಿರಾಕರಿಸಿದ್ದ ಆಡಳಿತ ಮಂಡಳಿ ಮುಸ್ಲಿಮರ ವ್ಯಾಪಾರಕ್ಕೆ ಅನುಮತಿ ಕೊಟ್ಟಿತ್ತು. ಆದರೆ, ಅನುಮತಿ ನೀಡಿದ್ದರೂ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ಯಾವುದೇ ವ್ಯಾಪಾರ ಮಾಡಲು ಬಂದಿರಲಿಲ್ಲ ಎನ್ನಲಾಗಿದೆ.
ಸುಮಾರು 800 ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಾಣವಾಗಿದೆ ಎಂದ ಪ್ರತೀತಿ ಇದೆ. ಬಪ್ಪಬ್ಯಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಒಲಿದಿದ್ದರು. ಆ ಬಳಿಕ ದೇವಿಯ ಸೂಚನೆಯಂತೆ ಬಪ್ಪಬ್ಯಾರಿ ದೇವಸ್ಥಾನ ನಿರ್ಮಿಸಿದರು ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಇತಿಹಾಸ. ಈ ಸಲವೂ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಆಡಳಿತ ಮಂಡಳಿ ನಿರ್ಧರಿಸಿದೆ. ಬಪ್ಪನಾಡಿನಲ್ಲಿ ಈ ರೀತಿಯ ಬೆಳವಣಿಗೆ ಆಗಿರುವುದು ಮತ್ತೆ ಚರ್ಚೆಗೀಡಾಗಿದೆ.