ನ್ಯೂಸ್ ನಾಟೌಟ್ : ಕಾಲ ಬದಲಾಗಿದೆ.ಪ್ರಾಮಾಣಿಕರನ್ನು ಹುಡುಕುವುದೇ ಕಷ್ಟವಾಗಿದೆ.ಕಳೆದು ಹೋದ ವಸ್ತುಗಳು ಇನ್ನೊಬ್ಬರ ಕೈ ಪಾಲಾದಾಗ ಆ ವಸ್ತುಗಳು ನಮ್ಮ ಕೈ ಸೇರುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ.ಅಥವಾ ಆ ವಸ್ತುಗಳನ್ನು ಖರೀದಿಸುವ ಹಿಂದೆ ಎಷ್ಟು ಶ್ರಮವಿದೆ ಅನ್ನುವಂಥದ್ದರ ಬಗ್ಗೆ ಕೆಲವರು ಮಾತ್ರ ಯೋಚಿಸುತ್ತಾರೆ.ಈಗಿನ ಕಾಲದಲ್ಲೂ ಅಲ್ಲೋ ಇಲ್ಲೋ ಬೆರಳೆಣಿಕೆಯ ಸಂಖ್ಯೆಯಲ್ಲಿ ಕೆಲವರು ಮಾನವೀಯತೆ,ಪ್ರಾಮಾಣಿಕತೆಗೆ ಬೆಲೆ ಕೊಡುವವರು ಇದ್ದಾರೆ.ಅಂಥವರ ಸಾಲಿಗೆ ಇಲ್ಲಿಬ್ಬರು ವ್ಯಕ್ತಿಗಳು ಸೇರಿಕೊಳ್ಳುತ್ತಾರೆ.ಬಸ್ ನಲ್ಲಿ ಸಿಕ್ಕಿದ್ದ ಚಿನ್ನದ ಮಾಂಗಲ್ಯ ಸರವನ್ನು ಮಹಿಳೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮತ್ತು ಪ್ರಾಮಾಣಿಕತೆ ಮೆರೆದಿದ್ದಾರೆ.
ಹುಣಸೂರು ಡಿಪೋಗೆ ಸೇರಿದ ಹುಣಸೂರು-ಕೊಯಮುತ್ತೂರು ಮಾರ್ಗದ ಬಸ್ ಚಾಲಕ ತಾಂಡವಮೂರ್ತಿ ಹಾಗೂ ನಿರ್ವಾಹಕ ಆರ್.ಪಿ.ಶಿವಕುಮಾರ್ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಇಬ್ಬರು ಸಿಬ್ಬಂದಿಗಳು.ಬಸ್ ನಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಭೇಷ್ ಎನಿಸಿಕೊಂಡಿದ್ದಾರೆ.ನಂಜನಗೂಡು ತಾಲ್ಲೂಕಿನ ಸುತ್ತೂರಿನ ಮಧು ಅವರ ಪತ್ನಿ ಸುಮಾ ಅವರು ಬಸ್ ನಲ್ಲಿ ಮಾಂಗಲ್ಯ ಸರ ಕಳೆದುಕೊಂಡಿದ್ದರು.
ಬಸ್ ನಿಂದ ಇಳಿದ ನಂತರ ಚಿನ್ನದ ಮಾಂಗಲ್ಯ ಸರ ಇಲ್ಲದನ್ನು ಕಂಡು ಮಹಿಳೆ ಗಾಬರಿಯಾಗಿದ್ದರು. ಸಾವಿರಾರು ಮೌಲ್ಯಕ್ಕೆ ಬೆಲೆಬಾಳುತ್ತಿದ್ದ ಮಾಂಗಲ್ಯ ಸರ ಎಲ್ಲಿ ಕಳೆದು ಹೋಗಿದೆ ಅನ್ನೋದು ಮಹಿಳೆಗೆ ಗಮನಕ್ಕೆ ಬಂದಿರಲಿಲ್ಲ. ಮಹಿಳೆ ಗಾಬರಿಯಾಗಿರುವುದನ್ನು ಗಮನಿಸಿದ ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ನಂಬರ್ ಪಡೆದು ಸಂಪರ್ಕಿಸಿ ಸರದ ಬಗ್ಗೆ ಮಾಹಿತಿ ನೀಡಿದರು. ಬಸ್ ನಲ್ಲಿ ಮಾಂಗಲ್ಯ ಸರ ಬಿದ್ದಿರುವ ಬಗ್ಗೆ ಬಸ್ ಸಿಬ್ಬಂದಿ ತಿಳಿಸಿದರು.ಬಸ್ ಚಾಮರಾಜನಗರಕ್ಕೆ ಮರಳಿ ಬಂದ ನಂತರ ಹುಣಸೂರು ಡಿಪೋ ವ್ಯವಸ್ಥಾಪಕರ ಸೂಚನೆಯಂತೆ ಚಾಲಕ ತಾಂಡವಮೂರ್ತಿ ಹಾಗೂ ನಿರ್ವಾಹಕ ಆರ್.ಪಿ.ಶಿವಕುಮಾರ್ ಅವರು ಚಾಮರಾಜನಗರ ಡಿಪೋ ಮ್ಯಾನೇಜರ್ ಕುಮಾರನಾಯ್ಕ ಅವರ ಮೂಲಕ ಮಾಂಗಲ್ಯದ ಸರವನ್ನು ವಾರಸುದಾರರಿಗೆ ಒಪ್ಪಿಸಿದರು.ಒಟ್ಟಿನಲ್ಲಿ ಚಿಂತೆಗೊಳಗಾಗಿದ್ದ ಮಹಿಳೆ ಮುಖದಲ್ಲಿ ಮಂದಹಾಸ ನಗು ಹೊರಹೊಮ್ಮಿತು. ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೂ ಸರ ಹಿಂತಿರುಗಿಸಿ ಸಹಾಯ ಮಾಡಿದ ಸಾರ್ಥಕ ಭಾವ ಮೂಡಿತು.