ನ್ಯೂಸ್ ನಾಟೌಟ್: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಗಡಿ ಜಿಲ್ಲೆ ಬಸವ ಭೂಮಿ ಬೀದರ್ ಜಿಲ್ಲೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಬೀದರ್ನ ಹುಮನಾಬಾದ್ನಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿರುವ ಮೋದಿಯವರು, ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಬಸವೇಶ್ವರರನ್ನು ನೆನೆದರು.
ಹುಮನಾಬಾದ ಸಮೀಪದ ಚಿನಕೇರಾ ಕ್ರಾಸ್ ಬಳಿ ಬೃಹತ್ ಸಾರ್ವಜನಿಕ ಸಭೆಯ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬೀದರ ಜಿಲ್ಲೆಯ ಆರು ಮತ್ತು ಕಲ್ಬುರ್ಗಿ ಜಿಲ್ಲೆಯ ಮೂರು ಸೇರಿ ಒಂಬತ್ತು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದರು.
ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಳಗ್ಗೆ 10.20ಕ್ಕೆ ಬೀದರ್ ವಾಯುನೆಲೆ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿನಕೇರಾ ಕ್ರಾಸ್ ಬಳಿ ಸ್ಥಾಪಿಸಿದ ಬೃಹತ್ ವೇದಿಕೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಾಥ್ ನೀಡಿದರು. ಬೀದರ ಲೋಕಸಭಾ ಕ್ಷೇತ್ರದ 8 ಮತ್ತು ಕಲ್ಬುರ್ಗಿ ಗ್ರಾಮಾಂತರ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.