ನ್ಯೂಸ್ ನಾಟೌಟ್: ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಆರೋಪ ಪ್ರತ್ಯಾರೋಪ ಮುಗಿಲು ಮುಟ್ಟಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮೊದಲು ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಹೆಬ್ರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಬಯಸಿ ಸಿಗದಿದ್ದಾಗ ಅಂದು ಗೋಪಾಲ ಭಂಡಾರಿ ಬದುಕಿದ್ದಾಗಲೇ ಸಾರ್ವಜನಿಕವಾಗಿ ಅವರ ಶವಯಾತ್ರೆ ನಡೆಸಿದ ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿಗೆ ಈಗ ನಾಲ್ಕು ವರ್ಷದ ನಂತರ ಭಂಡಾರಿಯವರ ನೆನಪಾಗಿದೆ. ಅವರ ಪುತ್ಥಳಿ ನಿರ್ಮಿಸುವುದಕ್ಕೆ ಜ್ಞಾನೋದಯವಾಗಿದೆ. ತಾವು ಮೊದಲು ತಮ್ಮ ಬದ್ಧತೆ ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ಟೀಕಿಸಿದ್ದಾರೆ. ಟಿಕೆಟ್ ಸಿಗದಿದ್ದಾಗ ಜೀವಂತವಿದ್ದ ವ್ಯಕ್ತಿಯನ್ನೇ ಶವಯಾತ್ರೆ ನಡೆಸಿ ಸುಟ್ಟರು. ಊರೆಲ್ಲ ಸಂಭ್ರಮಿಸಿದ್ದರು. ಅಂದು ಮಾನವೀಯತೆ ಮರೆತು ಅಮಾನವೀಯವಾಗಿ ನಡೆದುಕೊಂಡವರು ಅವರ ಹೆಸರಲ್ಲಿ ಇಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಟಿಕೆಟ್ ಸಿಕ್ಕಿದಾಗ ಒಂದು ಪಕ್ಷ ಒಂದು ನೀತಿ, ಟಿಕೆಟ್ ಸಿಗದೇ ಇದ್ದಾಗ ಇನ್ನೊಂದು ಕಡೆ ವಾಲುವ ನೀವು ನಿಜವಾಗಿಯೂ ಯಾವುದರಲ್ಲಿ ಇದ್ದೀರಿ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಜನಪ್ರತಿನಿಧಿಗೆ ಗೌರವ ಕೊಡುವುದು ಗೊತ್ತಿದೆ. ಅದೇ ಕಾರಣದಿಂದ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಅವರಿಗೆ ಗೌರವ ನೀಡಿದ್ದೇವೆ. ಕಾರ್ಕಳ ಉತ್ಸವ ಸಂದರ್ಭ ಪ್ರಧಾನ ವೇದಿಕೆಯಲ್ಲಿ ಭಂಡಾರಿಯವರ ಹೆಸರನ್ನಿಟ್ಟು ದೊಡ್ಡ ಮಟ್ಟದ ಗೌರವ ಸಲ್ಲಿಸಿದ್ದೇವೆ ಎಂದು ಸುನಿಲ್ ಕುಮಾರ್ ತಿಳಿಸಿದರು.