ನ್ಯೂಸ್ ನಾಟೌಟ್ : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿಯಿದ್ದು, ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದರು. ಶಕ್ತಿ ಪ್ರದರ್ಶನ, ರೋಡ್ ಶೋ, ಬೃಹತ್ ಮೆರವಣಿಗೆ ಮೂಲಕ ಸಾಗಿ ಬಂದ ಬಳಿಕ ಬೃಹತ್ ಸಮಾವೇಶ ನಡೆಯಿತು.
ಕ್ಷೇತ್ರದ ಅಭಿವೃದ್ಧಿಯ ವೇಗಕ್ಕೆ ಸುನೀಲ್ ಅನಿವಾರ್ಯ
ಈ ವೇಳೆ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಸುನಿಲ್ ಕುಮಾರ್ 50 ಸಾವಿರ ಅಂತರ ಓಟಿನಿಂದ ಗೆಲ್ಲುತ್ತಾರೆ. ಅವರು ಕ್ಷೇತ್ರಕ್ಕೆ ಅವಶ್ಯಕತೆ ಅಲ್ಲ, ಅನಿವಾರ್ಯ. ಕರ್ನಾಟಕದಲ್ಲೂ ಬಿಜೆಪಿ ಅನಿವಾರ್ಯ. ಕಾರ್ಕಳ ಜನರು ಒಟ್ಟಾಗಿ ಲೀಡ್ ನಿಂದ ಅವರನ್ನು ಗೆಲ್ಲಿಸಬೇಕು. ಶಾಸಕರಾಗಿ ಕಾರ್ಕಳದ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಸುನೀಲ್ ಕುಮಾರ್ ಮಾಡಿದ್ದಾರೆ ಅನ್ನೊದು ನಿಮಗೆ ತಿಳಿದಿದೆ.ಜನಸಾಮಾನ್ಯರಿಗಾಗಿ ಅವರ ಹೃದಯ ಮಿಡಿದಿದೆ. ಸಾಧಾರಣ ವ್ಯಕ್ತಿಗಳಿಗೆ ಪರಶುರಾಮ್ ಥೀಮ್ ಪಾರ್ಕ್ ಮಾಡಿದ್ದು ವಿಶೇಷ ಎಂದರು.
ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ‘ಸುನೀಲ್ ಜಾತಿಯ ನಾಯಕ ಅಲ್ಲ, ಕರ್ನಾಟಕ ರಾಜ್ಯದ ಪ್ರಭಾವಿ ನಾಯಕ,ದ್ವೇಷ ರಾಜಕಾರಣಿ ಅಲ್ಲ, ಜನರನ್ನು ಪ್ರೀತಿಸುವ ನಾಯಕ,ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಾಯಕ’ ಎಂದರು.
ಬಳಿಕ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾರ್ಕಳದಲ್ಲಿ ಈಗಾಗಲೇ ಬಿಜೆಪಿ ಅರ್ಧ ಗೆದ್ದಿದೆ. ಸುನೀಲ್ ಕುಮಾರ್ ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುವ ಅಪರೂಪದ ವ್ಯಕ್ತಿ. ಸುನೀಲ್ ಗೆಲ್ಲಿಸಿ ಸಜ್ಜನ ವ್ಯಕ್ತಿ ಕೈಗೆ ಅಧಿಕಾರ ಕೊಡಿ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜನರ ಜತೆ ಮಾತನಾಡಬೇಕು. ಜನರ ಪರವಾಗಿ ಇರಬೇಕು. ಜನರಲ್ಲಿ ಜಾತಿ-ಭೇದ ಮಾಡದ ವ್ಯಕ್ತಿ ಇದ್ದರೆ ಅದು ಸುನೀಲ್ ಕುಮಾರ್ ಮಾತ್ರ. ಸುನೀಲ್ ಬಗೆಗಿನ ಟೀಕೆ ಸಲ್ಲದು. ಟೀಕಾಕಾರರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದರು.
ಜನರ ಸಮಸ್ಯೆಗೆ ಶೀಘ್ರ ಸ್ಪಂದನೆ
ಬಿಜೆಪಿ ಹಿರಿಯ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದು, ಐದು ವರ್ಷದ ಬಿಜೆಪಿಯ ಫಲಾನುಭವಿ ಈಗ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದಾರೆ.ಯಾವ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಚುನಾವಣೆಗೆ ಹೊರಟಿದೆ ಅನ್ನೋದು ತಿಳಿದಿದೆ. ಕಾರ್ಕಳದ ಜನರ ಆಶೀರ್ವಾದ ದಿಂದ ಕಳೆದ ಐದು ವರ್ಷದಿಂದ ಅಭಿವೃದ್ಧಿ ನೋಡಿದ್ದೀರಿ. ಬಿಜೆಪಿ ಶಾಸಕ ಬಂದ ನಂತರ ಹೇಗೆ ಬದಲಾಗಿದ್ದೇವೆ ನೋಡಿದ್ದೀರಿ. ಐದು ವರ್ಷದಿಂದ ನಿಮ್ಮ ಜತೆಗಿದ್ದೇನೆ. ಕರೋನಾ ಸಂಕಷ್ಟದ ಸಂದರ್ಭ ಮುಂಬೈನಿಂದ ಬಂದ ಜನರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದೇವೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ
ಕಾರ್ಕಳ ರಸ್ತೆ ಹತ್ತು ವರ್ಷದ ಹಿಂದೆ ಹೇಗಿತ್ತು..? ಈಗ ಹೇಗಾಗಿದೆ ನೀವೇ ಊಹಿಸಿ. ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ, ಕಿಂಡಿ ಅಣೆಕಟ್ಟು ನಿರ್ಮಿಸಿ ಕೃಷಿ ಭೂಮಿ ಗೆ ನಿರುಣಿಸಿದ ಸಾಧನೆ ನಮ್ಮದು.ಶಿಕ್ಷಣಕ್ಕೆ ನಾವು ಕೊಟ್ಟ ಕೊಡುಗೆ ನೆನಪಿಸಿಕೊಳ್ಳಿ. ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಿದ್ದೇವೆ. ಕಾರ್ಕಳ ನಮ್ಮ ಹೆಮ್ಮೆ ಅಂತ ಹೇಳುತ್ತಿದ್ದೇವೆ.ಕಾಂಗ್ರೆಸ್ ಬಂದ್ರೆ ವಿನಾಶ, ಬಿಜೆಪಿ ಅಂದ್ರೆ ವಿಕಾಸ.ಡಬಲ್ ಎಂಜಿನ್ ಸರ್ಕಾರ ಬೆಂಬಲಿಸಿ, ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಭಯದಲ್ಲಿತ್ತು.ನಿಮ್ಮ ಋಣವನ್ನು ಅಭಿವೃದ್ಧಿ ಮೂಲಕ ಮಾಡಿ ತೀರಿಸುತ್ತೇನೆ.ಕಾರ್ಕಳದಲ್ಲಿ ನಾಲ್ಕು ಸಾವಿರ ಜನರಿಗೆ ಹಕ್ಕು ಪತ್ರ ನೀಡಿದ್ದೇವೆ.ಉದ್ಯೋಗ ಕ್ಕಾಗಿ ಜವುಳಿ ಕಾರ್ಖಾನೆ ನೀಡಿದ್ದೇವೆ. ಎರಡು ಸಾವಿರ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ ಎಂ.ಕೆ.ವಿಜಯ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಉಡುಪಿ ಶಾಸಕ ರಘುಪತಿ ಭಟ್ ಸಹಿತ ಹಲವು ಬಿಜೆಪಿ ಪ್ರಮುಖರು,ಕಾರ್ಯಕರ್ತರು,ಅಭಿಮಾನಿಗಳು ಪಾಲ್ಗೊಂಡರು.