ನ್ಯೂಸ್ ನಾಟೌಟ್ : ನೆಲ್ಯಾಡಿ ಸಮೀಪದ ಶಿರಾಡಿ ಗ್ರಾಮದ ಗುಂಡ್ಯ ಪರಿಸರದಲ್ಲಿ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಬೃಹತ್ ಮರವೊಂದು ಅಂಗಡಿಯೊಂದರ ಮೇಲೆ ಉರುಳಿ ಬಿದ್ದಿದ್ದು,ನೆಲ ಸಮಗೊಂಡ ಘಟನೆ ಮಂಗಳವಾರ ಸಾಯಂಕಾಲ ಸಂಭವಿಸಿದೆ.
ಗುಂಡ್ಯ ಪೇಟೆಯಲ್ಲಿ ಹೆದ್ದಾರಿ ಬದಿಯ ಬೃಹತ್ ಮರವೊಂದು ರೋಬಿನ್ ಅವರ ಅಂಗಡಿಯ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ಅಂಗಡಿ ಸಂಪೂರ್ಣ ನೆಲ ಸಮಗೊಂಡಿದೆ. ಅಂತೆಯೇ ಕೆಲವು ಮನೆಯ ಹಂಚುಗಳು ಹಾಗೂ ಶೀಟುಗಳು ಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ.
ಗುಂಡ್ಯ ಪರಿಸರದ ಹಲವಾರು ಕಡೆಗಳಲ್ಲಿ ಈ ಅವಘಡ ಸಂಭವಿಸಿದೆ. ಮರಗಳು ಧರೆಗುರುಳಿದ ಹಿನ್ನೆಲೆ ವಿದ್ಯುತ್ ಕಂಬಗಳು ಹಾನಿಗೀಡಾಗಿದೆ.ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕೂಡ ಉಂಡಾಗಿದೆ.ಕೆಲವೊಂದು ಕಡೆ ಹೆದ್ದಾರಿಗೆ ಮರಗಳು ಉರುಳಿದ ಪರಿಣಾಮ ಕೆಲ ಕಾಲ ಹೆದ್ದಾರಿ ಸಂಚಾರಕ್ಕೂ ಅಡಚಣೆಯಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಗಾಳಿಯ ಅಬ್ಬರಕ್ಕೆ ಹಲವೆಡೆ ಅಡಿಕೆ ಮರಗಳು ಸಹಿತ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.