ನ್ಯೂಸ್ ನಾಟೌಟ್ : ಅಲ್ಯೂಮಿನಿಯಂ ದೋಟಿ ಕೊಂಡೊಯ್ಯುತ್ತಿದ್ದ ವೇಳೆ ಅದು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ತ್ ಸ್ಪರ್ಶವಾದ ಪರಿಣಾಮ ಮೂವರು ಮಕ್ಕಳು ಗಾಯಗೊಂಡ ಘಟನೆ ಚಾರ್ಮಾಡಿಯಲ್ಲಿ ಭಾನುವಾರ ನಡೆದಿದೆ.
ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ಗೆ ವಿದ್ಯುತ್ ಪೂರೈಸುವ ಮತ್ತು ಅಗತ್ಯ ಸಂದರ್ಭ ಅದರಲ್ಲೇ ರಿಟರ್ನ್ ಲೈನ್ ಇರುವ ಖಾಸಗಿ ಕಂಪೆನಿಯೊಂದರ ಮುಖ್ಯ ವಿದ್ಯುತ್ ಲೈನ್ ಇದಾಗಿದ್ದು ಚಾರ್ಮಾಡಿಯಲ್ಲಿ ಹೆದ್ದಾರಿ ಬದಿ ಹಾದು ಹೋಗಿದೆ. ಈ ಲೈನ್ ನ ಪಕ್ಕದಲ್ಲಿ ಈ ಮೂವರು ಮಕ್ಕಳು ಶನಿವಾರ ದೋಂಟಿ ಹಿಡಿದುಕೊಂಡು ಹೋಗುತ್ತಿದ್ದಾಗ ಅದು ಆಕಸ್ಮಿಕವಾಗಿ ವಿದ್ಯುತ್ ಲೈನ್ ಗಳನ್ನು ಸ್ಪರ್ಶಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಆಘಾತಕ್ಕೊಳಗಾದ ಮಕ್ಕಳನ್ನು ಸ್ಥಳೀಯರು ಕೂಡಲೇ ಕಕ್ಕಿಂಜೆ ಹಾಗೂ ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳ್ತಂಗಡಿಯ ಚಾರ್ಮಾಡಿಯ ಇಮ್ತಿಯಾಝ್ ಎಂಬವರ ಮಕ್ಕಳಾದ ಮುಹಮ್ಮದ್ ಅಲಿ(16), ಮುಹಮ್ಮದ್ ಇನಾಝ್(8) ಹಾಗೂ ಹನೀಫ್ ಎಂಬವರ ಪುತ್ರ ಅಯಾನ್( 6). ಗಾಯಗೊಂಡವರು ಎಂದು ವರದಿ ತಿಳಿಸಿದೆ.
ಘಟನೆಯಿಂದ ಸುಟ್ಟ ಗಾಯಗಳಿಗೆ ಒಳಗಾಗಿರುವ ಮಕ್ಕಳು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿದ್ಯುತ್ ಪಕ್ಕವೇ ಎಚ್.ಟಿ ವಿದ್ಯುತ್ ಲೈನ್ ಇದ್ದು ಘಟನೆ ನಡೆದ ಸಂದರ್ಭ ಲೋಡ್ ಶೆಡ್ಡಿಂಗ್ ಇದ್ದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.