ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲವು ವಿಸ್ಮಯಗಳಿಗೆ ಕಾರಣವಾದ ಪುಣ್ಯ ಕ್ಷೇತ್ರ. ಭಕ್ತರ ಬೇಡಿಕೆಯನ್ನು ಈಡೇರಿಸುವ ಸ್ವಾಮಿ ಶ್ರೀ ಮಹಾಲಿಂಗೇಶ್ವರ ದೇಗುದಲ್ಲಿ ವರುಣ ದೇವರ ವಿಗ್ರಹ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಪವಾಡ ನಡೆದಿದೆ.
ಇಲ್ಲಿ ಪುನರ್ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಈ ವೇಳೆ ಹಲವು ವಿಸ್ಮಯಗಳು ಕಂಡು ಬಂದಿವೆ. ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಕೆಳಭಾಗ ವರುಣ ದೇವರ ವಿಗ್ರಹ ಕಂಡು ಬಂದಿತ್ತು. ಅದರ ಬಳಿಯಲ್ಲಿಯೇ ಭೂಗರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿರುವುದು ಬೆಳಕಿಗೆ ಬಂದ ಘಟನೆ ವರದಿಯಾಗಿತ್ತು. ಅದಾದ ಬಳಿಕ ಮೂರೇ ದಿನದೊಳಗೆ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಇನ್ನೊಂದು ದೊಡ್ಡದಾದ ಪಾಣಿಪೀಠ ಬೆಳಕಿಗೆ ಬಂದಿದ್ದು ಪವಾಡವೆಂಬಂತಿದೆ.
ದೇವಳದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿತ್ತು. ಸಂಪೂರ್ಣ ಶಿಲಾಮಯ ಕಟ್ಟೆಯನ್ನಾಗಿ ಮಾಡುವ ಸಂದರ್ಭ ಮಾ.27ರಂದು ಕೆರೆಯ ಮಧ್ಯ ಭಾಗದ ಕಟ್ಟೆಯ ಸುತ್ತ ಕಾಪರ್ ಡ್ರಾಜ್ ಮಾಡಿ ಒಳಗಿನ ನೀರನ್ನು ಹೊರತೆಗೆದಾಗ ವರುಣ ದೇವರ ವಿಗ್ರಹ ಬೆಳಕಿಗೆ ಬಂದಿತ್ತು. ಅದಾದ ಬಳಿಕ ವರುಣ ದೇವರ ವಿಗ್ರಹದ ಕಳಗಡೆ ಪಾಣಿಪೀಠ ಬೆಳಕಿಗೆ ಬಂದಿತ್ತು.ರಾತ್ರಿ ಕಟ್ಟೆಯ ನಾಲ್ಕು ಸ್ತಂಭಗಳನ್ನು ತೆರವು ಮಾಡಿ ಶಿಲಾಮಯ ಸ್ಥಂಭಗಳನ್ನು ಇಡಲು ಆಳವಾದ ಗುಂಡಿಯನ್ನು ತೋಡುವಾಗ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಬೆಳಕಿಗೆ ಬಂದಿತ್ತು.ಇದಾದ ಬಳಿಕ ದೊಡ್ಡದಾದ ಪಾಣಿಪೀಠ ಮಾ.೩೧ರಂದು ಬೆಳಕಿಗೆ ಬಂದಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಇದರ ಜೊತೆ ಎದುರು ತಾಮ್ರದ ಸಣ್ಣ ಕರಡಿಗೆಯೂ ಪತ್ತೆಯಾಗಿದೆ.ಕೆಲವು ವರ್ಷಗಳ ಹಿಂದೆ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದು ಬಾರಿ ಸುದ್ದಿಯಾಗಿತ್ತು.
ಕಟ್ಟೆ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಶಿಲ್ಪಿ ಗುಣವಂತೇಶ್ವರ ಭಟ್, ಎಂಜಿನಿಯರ್ ರಘುರಾಮ ಭಟ್ ಮತ್ತು ದೇವಳದ ವಾಸ್ತು ಎಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಪಾಣಿಪೀಠ ಗೋಚರ ಆಗುತ್ತಿದ್ದಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ, ಹರೀಶ್ ಭಟ್, ಉದಯಕೃಷ್ಣ ಭಟ್ ಅವರು ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿದರು.