ನ್ಯೂಸ್ ನಾಟೌಟ್ : ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಿಂದ ವರದಿಯಾಗಿದೆ.ಸಾವಿರಾರು ಕನಸುಗಳನ್ನು ಹೊತ್ತುಕೊಂಡು ಆಟವಾಡಲೆಂದು ಅಂಗಳಕ್ಕೆ ತೆರಳಿದ್ದ ಬಾಲಕಿ,ಸುಸ್ತಾಗಿದೆ ಎಂದು ಮಲಗಿದ್ದವಳು ಹೆಣವಾದಳು!.ಈಗೀಗ ಯುವಕರು ಸೇರಿದಂತೆ ಚಿಕ್ಕ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆನ್ನುವುದು ತುಂಬಾ ನೋವಿನ ಸಂಗತಿ.
ಈ ಘಟನೆ ಸಂಭವಿಸಿದ್ದು ಹೈದರಾಬಾದ್ ನ ಮಹಬೂಬಾಬಾದ್ನ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ. 6ನೇ ತರಗತಿಯ ವಿದ್ಯಾರ್ಥಿನಿ ನಿನ್ನೆ ಆಟವಾಡಿ ಬಂದು ಮಲಗಿದ್ದಾಳೆ.ಸ್ವಲ್ಪ ಸಮಯದ ಬಳಿಕ ಬಾಲಕಿ ಶ್ರವಂತಿ ರಾತ್ರಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಮನೆ ಮಂದಿ ಇದನ್ನು ನೋಡಿ ವೈದ್ಯರ ಬಳಿಗೆ ಕರೆದೊಯ್ಯುವ ಮುನ್ನವೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಶ್ರೀರಾಮ ನವಮಿ ನಿಮಿತ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು. ಆಕೆ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯ ಪೋಷಕರು ಕೃಷಿಕರಾಗಿದ್ದು ಈಕೆ ಎರಡನೇ ಮಗಳು. ಇನ್ನೂ ಬಾಳಿ ಬದುಕಬೇಕಿದ್ದ ಮಗಳ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ತೆಲಂಗಾಣದಲ್ಲಿ ಕಳೆದ 1-2 ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.