ನ್ಯೂಸ್ ನಾಟೌಟ್: ಕಳೆದ 50 ವರ್ಷಗಳಿಂದ ಸರಿಯಾಗದೆ ಹಾಗೆಯೇ ಉಳಿದಿದ್ದ ಹರಿಹರ-ಬಾಳುಗೋಡು ರಸ್ತೆಗೆ ಇದೀಗ ಮೇಜರ್ ಸರ್ಜರಿ ಆರಂಭವಾಗಿದೆ. ನ್ಯೂಸ್ ನಾಟೌಟ್ ವಿಶೇಷ ವರದಿಯ ಬೆನ್ನಲ್ಲೇ ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.
ಏಪ್ರಿಲ್ ೪ರಂದು ಹರಿಹರ-ಬಾಳುಗೋಡು ಸಂಪರ್ಕ ರಸ್ತೆಯ ಪ್ಯಾಥೆಟಿಕ್ ಸ್ಟೋರಿಯ ಬಗ್ಗೆ ನ್ಯೂಸ್ ನಾಟೌಟ್ ಚಾನಲ್ನಲ್ಲಿ ಸವಿವರವಾಗಿ ವಿವರಿಸಲಾಗಿತ್ತು. ಊರಿನ ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಕೂಡಲೇ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಹಾಗೂ ನೋಟಾದ ಎಚ್ಚರಿಕೆಯನ್ನು ನೀಡಿದ್ದರು.
ಈ ಬೆನ್ನಲ್ಲೇ ರಾಜಕಾರಣಿಗಳು ಎಚ್ಚೆತ್ತುಕೊಂಡಂತಿದೆ. ಮರುದಿನವೇ ಈ ರಸ್ತೆಯನ್ನು ದುರಸ್ತಿ ಮಾಡುವ ಕೆಲಸವನ್ನು ಆರಂಭಿಸಲಾಗಿದೆ. ಇದೀಗ ಜೆಸಿಬಿ ಯಂತ್ರದ ಮೂಲಕ ಹಳೆಯ ರಸ್ತೆಗೆ ಕಾಯಕಲ್ಪ ನೀಡುವ ಕೆಲಸ ಆಗುತ್ತಿದೆ. ಜಲ್ಲಿಕಲ್ಲು ಕೂಡ ಬಂದು ಬಿದ್ದಿದೆ. ಕೆಲಸ ಭರದಿಂದ ಸಾಗುತ್ತಿದೆ ಎಂದು ಸ್ಥಳೀಯರು ಸಂತೋಷದಿಂದ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ್ದಾರೆ.