ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ 2014 ರಲ್ಲಿ ತನ್ನ ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿಯು ವೃದ್ಧ ತಾಯಿಯ ಕುತ್ತಿಗೆಯ ಮೇಲೆ ಕಡಗೋಲಿನಿಂದ ಹಲ್ಲೆ ನಡೆಸಿದ್ದ. ನಂತರ ಅತ್ಯಂತ ಅಮಾನವೀಯ ಮತ್ತು ಬರ್ಬರವಾಗಿ ಆಕೆಯ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದ ಎನ್ನಲಾಗಿದೆ.
ರಾಮನಗರದ ನಿವಾಸಿ ಜೀತ್ ಸಿಂಗ್ ಅಪರಾಧಿಯಾಗಿದ್ದು, ತಾಯಿಯೊಂದಿಗೆ ಜಮೀನು ನೀಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದ. ಇನ್ನೊಬ್ಬ ಮಗ ಮುಲಾಖ್ ರಾಜ್ನೊಂದಿಗೆ ವಾಸಿಸುವಂತೆ ಒತ್ತಾಯಿಸುತ್ತಿದ್ದ. ಈ ಕಾರಣಕ್ಕಾಗಿ 2014ರ ಡಿಸೆಂಬರ್ 7ರಂದು ತಾಯಿ ವೈಷ್ಣೋದೇವಿಯನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ.
ಪತ್ನಿ ಸಂತೋಷ್ ದೇವಿ ಅತ್ತೆಯನ್ನು ರಕ್ಷಿಸಲು ಮುಂದಾದಾಗ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದ. ಶನಿವಾರ ಈತನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದೆ.