ನ್ಯೂಸ್ ನಾಟೌಟ್ : ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವಾಗ ಬರಿಪದ ಪೊಲೀಸರು ಶನಿವಾರ ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್ಐಸಿಎನ್) ಚಲಾವಣೆಯಲ್ಲಿರುವ ದಂಧೆಯನ್ನು ಪತ್ತೆಹಚ್ಚಿದ್ದಾರೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಹಿಳೆ ಮತ್ತು ಆಕೆಯ ಪತಿ ಈ ದಂಧೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಆರೋಪಿಗಳನ್ನು ರಂಜಿತಾ ಬೆಹೆರಾ ಮತ್ತು ಆಕೆಯ ಪತಿ ಎಂದು ಗುರುತಿಸಲಾಗಿದೆ. 3 ಲಕ್ಷ ರೂಪಾಯಿ ಠೇವಣಿ ಇಟ್ಟರೆ 10 ಲಕ್ಷ ರೂಪಾಯಿ ಭರವಸೆ ನೀಡಿ ನಕಲಿ ನೋಟುಗಳ ಸಹಾಯದಿಂದ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಈ ಗ್ಯಾಂಗ್ ಏಜೆಂಟ್ಗಳ ಸಹಾಯದಿಂದ ಮಾರುಕಟ್ಟೆಯಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದು, ಮಯೂರ್ಭಂಜ್, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನಲ್ಲಿ ಈ ದಂಧೆ ಸಕ್ರಿಯವಾಗಿತ್ತು ಎನ್ನಲಾಗಿದೆ.
ಈ ಪ್ರಕರಣ ಬೆಳಕಿಗೆ ಬರಲು ಮುಖ್ಯ ಕಾರಣ, ಕೆಲವು ದಿನಗಳ ಹಿಂದೆ ಕೆಲವು ನಕಲಿ ನೋಟುಗಳನ್ನು ತಲುಪಿಸಲು ಬಂದಿದ್ದ ಗಜೇಂದ್ರ ಬೆಹೆರಾ ಎಂಬ ಏಜೆಂಟ್ ನನ್ನು ಸ್ಥಳೀಯರು ಹಿಡಿದು ಬಂಧನದಲ್ಲಿಟ್ಟಿದ್ದರು ಈ ಸಂಬಂಧ ಗಜೇಂದ್ರನ ತಂದೆ ಆತ ಕಿಡ್ನಾಪ್ ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದರು. ಈ ಪ್ರಕರಣದ ತನಿಖೆಗೆ ಬಂದ ಪೊಲೀಸರಿಗೆ ಅಸಲಿ ಸತ್ಯ ತಿಳಿದಿದೆ.
‘ಅಪಹರಣ ಪ್ರಕರಣದ ತನಿಖೆ ನಡೆಸಿದಾಗ ನಕಲಿ ನೋಟುಗಳ ಸಹಾಯದಿಂದ ಸಂಪೂರ್ಣ ವಂಚನೆ ಮಾಡಿರುವುದು ಗೊತ್ತಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಉಮಾಶಂಕರ ಮೊಹರನಾ ತಿಳಿಸಿದ್ದಾರೆ.
ನಕಲಿ ನೋಟು ದಂಧೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಮತ್ತು ಅಪಹರಣದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.