ನ್ಯೂಸ್ ನಾಟೌಟ್: ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಸ್ಪರ್ಧೆಯ ಆಕಾಂಕ್ಷಿಗಳಿಗೆ ಚುನಾವಣಾ ಆಯೋಗದ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ವಾಟ್ಸಪ್ ನಲ್ಲಿ ಪ್ರಚಾರ ಮಾಡಿದರೂ ಚುನಾವಣಾ ಆಯೋಗ ನೋಟಿಸ್ ನೀಡುತ್ತಿರುವುದು ರಾಜಕೀಯ ಮುಖಂಡರಿಗೆ ತಲೆನೋವು ತಂದಿದೆ.
ವಾಟ್ಸಾಪ್ ಗ್ರೂಪ್ನಲ್ಲಿ ಪಕ್ಷದ ಚಿಹ್ನೆ ಬಳಸಿ ರಾಮನವಮಿಗೆ ಶುಭ ಕೋರಿದ್ದಕ್ಕಾಗಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ನ ಸಂಭಾವ್ಯ ಅಭ್ಯರ್ಥಿ ಮಂತರ್ ಗೌಡ ಅವರಿಗೆ ಚುನಾವಣಾಧಿಕಾರಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ರಾಮನವಮಿ ಹಿನ್ನೆಲೆಯಲ್ಲಿ ಮಂತರ್ ಗೌಡ ತಮ್ಮ ವಾಟಾಪ್ ಗ್ರೂಪ್ನಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿ ಕ್ಷೇತ್ರದ ಜನರಿಗೆ ರಾಮನವಮಿಯ ಶುಭಾಶಯ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಚುನಾವಣಾಧಿಕಾರಿ ಯತೀಶ್ ಉಳ್ಳಾಲ ನೋಟಿಸ್ ಜಾರಿ ಮಾಡಿದ್ದು, ‘ಇದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಹೀಗಾಗಿ, ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು’ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಈ ಬಗ್ಗೆ ಲಿಖಿತವಾಗಿ ಸಮಜಾಯಿಸಿ ನೀಡುವಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಕುಶಾಲನಗರ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಪ್ರೇರಿತ ವಿಡಿಯೋ ತುಣುಕು ಹಂಚಿಕೊಂಡಿದ್ದಕ್ಕಾಗಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಪಿ.ಶಶಿಧರ್ ಅವರಿಗೂ ಚುನಾವಣಾಧಿಕಾರಿ ನೋಟಿಸ್ ಜಾರಿಗೊಳಿಸಿರುವುದಾಗಿ ಎಂದು ವರದಿ ತಿಳಿಸಿದೆ.