ನ್ಯೂಸ್ನಾಟೌಟ್: ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆಗಾಗಿ ಜಮೀನು ಕಳೆದುಕೊಳ್ಳುತ್ತಿರುವ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಒದಗಿಸಿಕೊಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ಕ್ರಮವನ್ನು ಖಂಡಿಸಿ ವಿಧಾನಸಭಾ ಚುನಾವಣೆಯಲ್ಲಿ ಮತಹಾಕದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾ.ಹೆ. ಭೂಮಾಲಕರ ಹೋರಾಟ ಸಮಿತಿ ತಿಳಿಸಿದೆ.
ಈ ಬಗ್ಗೆ ಬುಧವಾರ ರಾ.ಹೆ. ಭೂಮಾಲಕರ ಹೋರಾಟ ಸಮಿತಿಯ ಸದಸ್ಯರು ಸಭೆ ಸೇರಿ ಈ ನಿರ್ಣಯ ಕೈಗೊಂಡರು.
ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಚತುಷ್ಪಥ ಯೋಜನೆಗೊಳಪಡುವ ಕುಲಶೇಖರದಿಂದ ಸಾಣೂರು ವರೆಗಿನ ಭೂಮಾಲಕರಿಗೆ ನ್ಯಾಯೋಚಿತವಾದ ಪರಿಹಾರವನ್ನು ವಿತರಿಸುವುದಕ್ಕೆ ಹೈಕೋರ್ಟ್ ಆದೇಶ ಬಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಲ್ಲದೆ ಜನಪ್ರತಿನಿಧಿಗಳು ಆಸಕ್ತಿ ವಹಿಸಿಲ್ಲ. ಇದನ್ನು ಖಂಡಿಸಿ ಮೇ 10ರ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮತದಾನ ಬಹಿಷ್ಕಾರದ ಬಗ್ಗೆ ತಿಳಿಸುವ ಹಾಗೂ ಬೇಡಿಕೆಗಳ ಕುರಿತು ಮನವಿಯನ್ನು ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಮನೋಹರ್ ಭಟ್ ಕುಡುಪು, ಸಂಚಾಲಕ ಪ್ರಕಾಶ್ಚಂದ್ರ, ಕಾರ್ಯದರ್ಶಿ ವಿಶ್ವಜಿತ್, ಖಜಾಂಚಿ ರತ್ನಾಕರ್ ಶೆಟ್ಟಿ, ಜಯರಾಮ ಪೂಜಾರಿ, ಬೃಜೇಶ್ ಶೆಟ್ಟಿ ಮಿಜಾರು ಹಾಗೂ ಭೂ ಮಾಲಕರು ಪಾಲ್ಗೊಂಡಿದ್ದರು.