ನ್ಯೂಸ್ ನಾಟೌಟ್: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನವಾಗಿದೆ. ಟ್ರಂಪ್ ವಿರುದ್ಧ ಕೇಳಿ ಬಂದ ಆರೋಪ ತನಿಖೆ ನಡೆಸಲು ಸೂಕ್ತವಾಗಿದೆ ಎಂದು ಇತ್ತೀಚೆಗೆ ಗ್ರ್ಯಾಂಡ್ ಜ್ಯೂರಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಭಾರೀ ಬಿಗಿಭದ್ರತೆಯೊಂದಿಗೆ ಟ್ರಂಪ್ ಮಂಗಳವಾರ ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂದಿಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದೂ ಸೇರಿದಂತೆ ಹಣ ವಂಚನೆಯ 30ಕ್ಕೂ ಹೆಚ್ಚು ದೋಷಾರೋಪಗಳನ್ನು ಹೊರಿಸಿತು. ಈ ವೇಳೆ ಟ್ರಂಪ್ ನಾನು ತಪ್ಪು ಮಾಡಿಲ್ಲ. 32 ಆರೋಪಗಳಲ್ಲಿ ನಾನು ನಿರಪರಾಧಿ ಎಂದಿದ್ದಾರೆ.
ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ 2016ರ ಅಧ್ಯಕ್ಷೀಯ ಚುನಾವಣೆಯ ಮೊದಲು ಟ್ರಂಪ್ $1,30,000 ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಟ್ರಂಪ್ ನಿರಾಕರಿಸಿದ್ದು, ಈ ಪ್ರಕರಣ ರಾಜಕೀಯ ದ್ವೇಷದಿಂದ ಮಾಡಲಾಗಿದ್ದು ಎಂದು ಆರೋಪಿಸಿದ್ದಾರೆ.
ದಶಕಗಳ ಹಿಂದೆ ಗಾಲ್ಫ್ ಪಂದ್ಯಾವಳಿ ಆಡಲು ತೆರಳಿದ್ದ ವೇಳೆ ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಜೊತೆ ಟ್ರಂಪ್ ಲೈಂಗಿಕ ಸಂಪರ್ಕ ಬೆಳೆಸಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯ ಪ್ರಸ್ತಾಪಿಸಿದ್ದರು. ಈ ನಡುವೆ 2016ರಲ್ಲಿ ಟ್ರಂಪ್ ಚುನಾವಣಾ ಕಣಕ್ಕೆ ಇಳಿದ ವೇಳೆ, ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು ಎನ್ನಲಾಗಿದೆ. ಈ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು.