ನ್ಯೂಸ್ ನಾಟೌಟ್ : ಕರಿಮೆಣಸು ಬಗ್ಗೆ ನೀವು ಕೇಳಿದ್ದೀರಿ, ನೋಡಿದ್ದೀರಿ ಆದರೆ ಆದಿ ಕರಿಮೆಣಸು ಬಗ್ಗೆ ನಿಮಗೆ ತಿಳಿದಿದೆಯಾ?ಹೌದು ಸೋಮವಾರಪೇಟೆ ತಾಲೂಕಿನ ಗಡಿ ಭಾಗದ ಗರ್ವಾಲೆ ಗ್ರಾಮದ ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಅವರು ‘ಆದಿ ಕರಿಮೆಣಸು’ ತಳಿಯನ್ನು ಬೆಳೆದು ಇದೀಗ ಸುದ್ದಿಯಲ್ಲಿದ್ದಾರೆ.
ಕರಿವಜ್ರ ಎಂದೇ ಹೆಸರುವಾಸಿಯಾಗಿರುವ ಈ ಆದಿಮೆಣಸು ಔಷಧೀಯ ಗುಣ, ವಿಶಿಷ್ಟ ಸುವಾಸನೆ, ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಸಮಸ್ಯೆ ನೀಗಿಸಲು ಹಾಗೂ ಕಡಿಮೆ ಕಾರ್ಮಿಕರು ಅಥವಾ ಬೆಳೆಗಾರರೇ ತೋಟವನ್ನು ನಿರ್ವಹಿಸುವಂತೆ ಮಾಡುವ ವಿಶೇಷ ವಿಧಾನ ಇದಾಗಿದೆ. ಇದು ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇದೀಗ ಇಂತಹ ತಳಿಯನ್ನು ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ಪರಿಚಯಿಸುತ್ತಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಹೆಚ್ಚು ಮಳೆ ಬೀಳುವ, ಸದಾ ಶೀತದಿಂದ ಕೂಡಿರುವ ಗರ್ವಾಲೆ, ಬ್ರಹ್ಮಗಿರಿ ಬೆಟ್ಟಶ್ರೇಣಿ, ಶಾಂತಳ್ಳಿ ಭಾಗಗಳಲ್ಲಿ ಸಾಮಾನ್ಯ ಕರಿಮೆಣಸಿನ ಬೆಳೆ ಬೆಳೆಯುವುದೇ ಕಷ್ಟ. ಅಂಥದ್ರಲ್ಲಿ, ಇವರು ಹಲವು ವರ್ಷಗಳ ಪರಿಶ್ರಮದಿಂದ ಆದಿ ಕರಿಮೆಣಸು ತಳಿಯನ್ನು ಬೆಳೆದು ಭೇಷ್ ಎನಿಸಿಕೊಂಡಿದ್ದಾರೆ.ಈ ಆದಿಕರಿಮೆಣಸು ನವೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಹೂವು ಬಿಡುವುದಲ್ಲದೇ ಹಸಿರು, ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಇದಕ್ಕೆ ರೋಗದ ಹಾವಳಿಯೂ ಕಡಿಮೆ ಎನ್ನುವುದು ಇವರ ಅಭಿಪ್ರಾಯ.
ಈ ಕುರಿತು ಮಾತನಾಡಿದ ಆದಿ ಮೆಣಸು ಬೆಳೆಗಾರರಾದ ನಾಪಂಡ ಪೂಣಚ್ಚ ನಾನು ಸಂಶೋಧಿಸಿದ ಆದಿ ಕರಿಮೆಣಸು ತಳಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸಸ್ ರೀಸರ್ಚ್ ವತಿಯಿಂದ ಪೇಟೆಂಟ್ ಪಡೆದುಕೊಂಡಿದೆ.ಇದಕ್ಕೆ ಕೇವಲ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಾತ್ರ ಬೆಳೆಯುವ ವಿಶೇಷ ತಳಿ ಎಂದು ಪ್ರಮಾಣೀಕರಣವನ್ನೂ ನೀಡಲಾಗಿದೆ ಎಂದು ಅಭಿಪ್ರಾಯ ಪಟ್ಟರು.ಆದಿ ಕರಿಮೆಣಸು ಸುಮಾರು 6-7 ಮಿ.ಮೀ. ನಷ್ಟು ದೊಡ್ಡದಿದ್ದು, ಸಾಮಾನ್ಯ ಕರಿಮೆಣಸು 4-5 ಮಿ.ಮೀ. ಗಾತ್ರವಿದೆ.ತೂಕವೂ ಹೆಚ್ಚು ಇರುತ್ತದೆ. ಸಾಮಾನ್ಯ ಕರಿಮೆಣಸು ಒಣಗಿದ ನಂತರ ಶೇ 33ರಿಂದ 38ರಷ್ಟು ಪ್ರಮಾಣದಲ್ಲಿ ಸಿಕ್ಕಿದರೆ, ಆದಿ ಕರಿಮೆಣಸು ಶೇ 38ರಿಂದ 42ರಷ್ಟು ಸಿಗುತ್ತದೆ.
ಈ ಮೆಣಸನ್ನು ಹೆಚ್ಚು ಮಳೆ ಬೀಳುವ, ಬೆಟ್ಟ ಗುಡ್ಡಗಳಿಂದ ಕೂಡಿರುವ ಪ್ರದೇಶದ ರೈತರೂ ಕಡಿಮೆ ವೆಚ್ಚದಲ್ಲಿ ವಾಣಿಜ್ಯ ಬೆಳೆ ಬೆಳೆಯಬೇಕು ಎನ್ನುವ ಆಕಾಂಕ್ಷೆಯುಳ್ಳವರು ಬೆಳೆಯಬಹುದಾಗಿದೆ. ‘ಆದಿ ಪೆಪ್ಪರ್ ಡೆಮೋ ಫಾರ್ಮ್ ಆಂಡ್ ರೀಸರ್ಚ್ ಸೆಂಟರ್’ ಮೂಲಕ ಬೆಳೆ ವಿಸ್ತರಿಸಲು ಇವರು ಶ್ರಮಿಸುತ್ತಿದ್ದು ಉತ್ತಮ ಯಶಸ್ಸಿಗಾಗಿ ದಾರಿ ನೋಡುತ್ತಿದ್ದಾರೆ. ಈಗಾಗಲೇ ಮೈಸೂರು ಸೇರಿದಂತೆ ಹಲವೆಡೆಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಕೃಷಿಕರು ಇಲ್ಲಿ ಬಂದು ಅಧ್ಯಯನ ಮಾಡುತ್ತಿದ್ದು, ಇವರ ಕೃಷಿ ನೋಡಿ ಆಶ್ಚರ್ಯವನ್ನ ಸೂಚಿಸಿದ್ದಾರೆ. ಇವರು ಕೇಂದ್ರ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕು ಕಾಯ್ದೆ ಪ್ರಾಧಿಕಾರದ ‘ತಳಿ ಸಂರಕ್ಷಕ ಪ್ರಶಸ್ತಿ’ಗೆ ಇವರು ಭಾಜನರಾಗಿದ್ದಾರೆ. ವಿಶೇಷವಾಗಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಆದಿ ಕರಿಮೆಣಸು ತಳಿಯ ರಕ್ಷಣೆಗಾಗಿ ಈ ಗೌರವ ಪಡೆದಿರುವುದು ವಿಶೇಷ.