ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದಿ ಗ್ರೇಟ್ ಫಿನಿಶರ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು. ಟೀಂ ಇಂಡಿಯಾ ಸೋಲುವ ಅದೆಷ್ಟೋ ಸಂದರ್ಭಗಳಲ್ಲಿ ಸಿಕ್ಸರ್ ಸಿಡಿಸಿ ಆಪತ್ಪಾಂಧವರಂತೆ ಕೈ ಹಿಡಿಯುತ್ತಿದ್ದರು. ಅಂತಹ ಧೋನಿಯನ್ನೇ ಆದರ್ಶವಾಗಿಟ್ಟುಕೊಂಡು ಭವಿಷ್ಯದ ಕ್ರಿಕೆಟರ್ ಆಗಿ ರೂಪುಗೊಳ್ಳುತ್ತಿದ್ದ ಯುವಕನೊಬ್ಬ ಕ್ಷುಲ್ಲಕ ವಿಚಾರಕ್ಕೆ ತಂದೆಯಿಂದಲೇ ಹತ್ಯಗೀಡಾಗಿ ಹೆಣವಾಗಿರುವುದು ವಿಪರ್ಯಾಸವೇ ಸರಿ.
ಕೋಳಿ ಸಾರಿನ ವಿಚಾರದಲ್ಲಿ ತಂದೆಯ ಜತೆ ಜಗಳದಲ್ಲಿ ತಂದೆಯಿಂದಲೇ ಮಗ ಶಿವರಾಮ (೩೩ ವರ್ಷ) ಹತ್ಯೆಯಾಗಿದ್ದಾರೆ. ಮಂಗಳವಾರ ತಡರಾತ್ರಿ ಘಟನೆ ನಡೆದುಬಿಟ್ಟಿದೆ. ಗುತ್ತಿಗಾರಿನ ಜನ ಭೀಕರ ಕೊಲೆ ಪ್ರಕರಣ ಕಂಡು ದಂಗಾಗಿದ್ದಾರೆ. ಮಾತ್ರವಲ್ಲ ಇಡೀ ಸುಳ್ಯ ತಾಲೂಕಿನ ಜನರಲ್ಲಿಯೂ ಈ ಪ್ರಕರಣ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಹೆಣವಾದ ಮಗ ಶಿವರಾಮ ಪ್ರತಿಭಾವಂತ ಕ್ರಿಕೆಟಿಗ ಅನ್ನುವುದು ಇದೀಗ ಬೆಳಕಿಗೆ ಬರುತ್ತಿದೆ. ನ್ಯೂಸ್ ನಾಟೌಟ್ ತಂಡದ ಜತೆಗೆ ಮಾತನಾಡಿರುವ ಅವರ ಸ್ನೇಹಿತರು ಈ ವಿಚಾರವನ್ನು ತಿಳಿಸಿದ್ದಾರೆ. ಶಿವರಾಮ ಅವರು ಹಲವಾರು ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು.
ಪ್ರತಿ ಪಂದ್ಯದಲ್ಲೂ ಶಿವರಾಮ ಮ್ಯಾಚ್ ವಿನ್ನರ್ ಆಗಿದ್ದರು ಅನ್ನುವುದನ್ನು ಅವರ ಸ್ನೇಹಿತರು ಸ್ಮರಿಸುತ್ತಾರೆ. ಇತ್ತೀಚೆಗೆ ಗುತ್ತಿಗಾರಿನಲ್ಲಿ ನಡೆದಿದ್ದ ಹಿಂದೂ ಟ್ರೋಫಿಯಲ್ಲಿ ಸೆಮಿಫೈನಲ್ ನಲ್ಲಿ ಶಿವರಾಮ ಭರ್ಜರಿ ಆರ್ಭಟ ಪ್ರದರ್ಶಿಸಿದ್ದರು. 7 ಎಸೆತಕ್ಕೆ19 ರನ್ ಅಗತ್ಯವಾಗಿದ್ದ ಸಂದರ್ಭದಲ್ಲಿ ಕ್ರೀಸ್ ನ ಸ್ಟ್ರೈಕ್ನಲ್ಲಿ ನಿಂತಿದ್ದ ಶಿವರಾಮ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ತಮ್ಮ ತಂಡ ಮೂಕಾಂಬಿಕಾ ಕ್ರಿಕೆಟರ್ ಗುತ್ತಿಗಾರು ತಂಡವನ್ನು ಫೈನಲ್ ದಡ ಸೇರಿಸಿದ್ದರು. ಮಾತ್ರವಲ್ಲ ಫೈನಲ್ನಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು ಅನ್ನುವುದು ವಿಶೇಷ. ಅಲ್ಲದೆ ಶಿವರಾಮ ಅವರು ಫ್ರೆಂಡ್ಸ್ ಕ್ರಿಕೆಟರ್ಸ್ ಮೊಗ್ರದ ಸದಸ್ಯರೂ ಆಗಿದ್ದರು. ಸುಳ್ಯ ತಾಲೂಕಿನ ಹಲವು ಕ್ರಿಕೆಟ್ ಟೂರ್ನಿಗಳಲ್ಲಿ ಶಿವರಾಮ ಮಿಂಚಿರುವುದು ವಿಶೇಷ.