ಪುತ್ತೂರು ನ್ಯೂಸ್ ನಾಟೌಟ್: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾ ಪ್ರಚಾರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆ ತಂಡ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಚುನಾವಣಾ ನಿರ್ವಹಣಾ ಕಚೇರಿಗೆ ತೆರಳಿ ಪ್ರಚಾರ ಸಾಮಗ್ರಿ ಪರಿಶೀಲಿಸಿತು.
ನೋಡೆಲ್ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರ ನೇತೃತ್ವದ ತಂಡ ಪರಿಶೀಲಿಸಿ ಚುನಾವಣಾ ಅಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಆಶಾತಿಮ್ಮಪ್ಪ ಅವರ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ನೀಡಿದ ದೂರಿನಂತೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತನ್ನ ಪ್ರಚಾರ ಸಾಮಗ್ರಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕಾ ಪ್ರಕಟಣೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ದೇಶದ ಪ್ರಧಾನಿ, ನಾಯಕರನ್ನು ನಾವು ಗೌರವದಿಂದ ಕಾಣುತ್ತೇವೆ. ಆದರೆ ಅವರ ಹೆಸರನ್ನು ಉಪಯೋಗಿಸಿಕೊಂಡು ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿಲ್ಲ. ಹಾಗಾಗಿ ತಮ್ಮ ಮೇಲೆ ನೀಡಿರುವ ಆರೋಪ ಸುಳ್ಳು ಎಂದು ಅರುಣ್ ಕುಮಾರ್ ಪುತ್ತಿಲ ಚುನಾವಣಾ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.