ನ್ಯೂಸ್ ನಾಟೌಟ್ : ಕ್ಯಾನ್ಸರ್ ಅನ್ನುವ ಮಾರಕ ಕಾಯಿಲೆ ವಿಪರೀತ ಸಂಖ್ಯೆಯ ಜನರಲ್ಲಿ ಕಂಡುಬರುತ್ತಿದೆ.ಕೆಲವೊಮ್ಮೆ ಅರಿವಿಲ್ಲದೇ ಬಂದು ರೋಗಗಳು ಆವರಿಸಿಬಿಡುತ್ತವೆ.ಅದರಲ್ಲೂ ಸ್ತನ ಕ್ಯಾನ್ಸರ್ ಇನ್ನೂ ಅಪಾಯವೆಂಬುದರ ಬಗ್ಗೆ ಸಾಕಷ್ಟು ವರದಿಗಳು ಪ್ರಕಟವಾಗಿದ್ದಾವೆ.ಕೆಲ ಕ್ಯಾನ್ಸರ್ ಕೊನೆ ಸ್ಟೇಜ್ ನಲ್ಲಿ ಪತ್ತೆಯಾಗುವುದೂ ಇದೆ.ಹೀಗಾಗಿ ದೇಹದಲ್ಲಿ ಏನಾದರೂ ವ್ಯತ್ಯಾಸಗಳಾದರೆ ಅಥವಾ ಮುನ್ಸೂಚನೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗುವುದು ಒಳಿತು.
ಸಾಮಾನ್ಯವಾಗಿ ಎದೆಹಾಲಿನ ಬಣ್ಣ ಬಿಳಿ ಬಣ್ಣದಿಂದ ಕೂಡಿರುತ್ತದೆ. ಹೆರಿಗೆಯಾದ ಕೆಲ ಕ್ಷಣದಲ್ಲಿ ಹಳದಿ ಬಣ್ಣದ ಮಿಶ್ರಿತದಿಂದ ಹಾಲು ಇದ್ದರೂ ,ಮಗು ಹಾಲು ಸೇವಿದ ಬಳಿಕ ಎದೆ ಹಾಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಎದೆಹಾಲಿನ ಬಣ್ಣ ಕೂಡ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ಸಂಕೇತವನ್ನು ಹೇಳುತ್ತದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.ಗರ್ಭಾವಸ್ಥೆಯ 32 ನೇ ವಾರದಲ್ಲಿ ಮಹಿಳೆಯೊಬ್ಬಳ ಎದೆ ಹಾಲಿನ ಬಣ್ಣ ಬದಲಾಗಿದೆ. ಅನುಮಾನಗೊಂಡ ಮಹಿಳೆ ಪರೀಕ್ಷೆ ನಡೆಸಿದಾಗ ಕ್ಯಾನ್ಸರ್ ಇರೋದು ಪತ್ತೆಯಾಗಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೇಟ್ ಗ್ರೇಂಗರ್ ಅವರಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಫೆಬ್ರವರಿ 25 ರಂದು ಅವರು ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಆಕೆ ಎದೆ ಹಾಲಿನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗಿತ್ತಂತೆ. ಅನುಮಾನ ಬಂದ ಗ್ರೇಂಗರ್, ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇದೆ ಎಂಬುದು ಪರೀಕ್ಷೆಯಿಂದ ತಿಳಿದು ಬಂದಿದೆ.
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಅಪಾಯಕಾರಿ ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಹೇಳಿದೆ.ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಈ ಕ್ಯಾನ್ಸರ್ ಸಾಮಾನ್ಯವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ.ಇದು ಬೇರೆ ಕ್ಯಾನ್ಸರ್ ಗಿಂತ ಬಹಳ ಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ.ಇದು ತುಂಬಾ ವಿರಳ ಕೇಸ್ ಆಗಿದ್ದು,ಕ್ಯಾನ್ಸರ್ ಕೋಶಗಳು ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ರಿಸೆಪ್ಟರ್ಸ್, ಮತ್ತು ಹೆಚ್ ಇಆರ್ 2 ಪ್ರೋಟೀನ್ಗಳನ್ನು ಹೊಂದಿರದಿದ್ದಾಗ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ ಎಂದು ಹೇಳಲಾಗಿದೆ.
ಸ್ತನದಲ್ಲಿ ಊತ, ಅಸಹಜವಾಗಿ ಬೆಳೆಯುವ ಚರ್ಮ, ನಿಪ್ಪಲ್ ನಲ್ಲಿ ನೋವು, ನಿಪ್ಪಲ್ ಒಳಗೆ ಹೋಗುವುದು, ನಿಪ್ಪಲ್ ಸುತ್ತ ಒಣ ಮತ್ತು ಫ್ಲಾಕಿ ಚರ್ಮ, ನಿಪ್ಪಲ್ ನಲ್ಲಿ ಡಿಸ್ಜಾರ್ಜ್, ತೋಳಿನ ಕೆಳಗೆ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಇದರ ಲಕ್ಷಣವೆಂದು ತಿಳಿದು ಬಂದಿದೆ.
ಉಳಿದ ಸ್ತನ ಕ್ಯಾನ್ಸರ್ಗೆ ಹೋಲಿಸಿದರೆ, ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ಮತ್ತೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆಯಂತೆ. ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಅಪಾಯಕಾರಿ ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಹೇಳಿದೆ. ಇದು ದೇಹದಲ್ಲಿ ವೇಗವಾಗಿ ಹರಡುತ್ತದೆ. ಈ ಕ್ಯಾನ್ಸರ್ ನಿಂದ ಬದುಕಿ ಬರುವ ಪ್ರಮಾಣ ಬಹಳ ಕಡಿಮೆ ಎನ್ನಬಹುದು ಎಂದು ವೈದ್ಯರ ಅಭಿಪ್ರಾಯ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಎಲ್ಲ ವಿಧದ ಸ್ತನ ಕ್ಯಾನ್ಸರ್ ನಲ್ಲಿ ಶೇಕಡಾ 10 – 15ರಷ್ಟು ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಈ ಕಾಯಿಲೆ ಬರದಂತೆ ಬಹಳ ಎಚ್ಚರದಿಂದ ತಡೆಗಟ್ಟಬೇಕು. ರಕ್ತ ಸಂಬಂಧಿಗಳಲ್ಲಿ ಈ ಕಾಯಿಲೆ ಮೊದಲೇ ಇದ್ದರೆ ಬರುವ ಸಾಧ್ಯತೆಯಿರುತ್ತದೆ. BRCA1 ಮತ್ತು BRCA2 ಜೀನ್ಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ಈ ಸಮಸ್ಯೆ ಕಾಡುತ್ತದೆ. ಇನ್ನುಳಿದಂತೆ ತೂಕ ಹೆಚ್ಚಾದಾಗ, ಋತುಬಂಧದಲ್ಲಿ ವಿಳಂಬವಾದಾಗ, ವಿಕಿರಣಕ್ಕೆ ದೇಹವನ್ನು ಒಡ್ಡಿದಾಗ, ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಕೂಡ ಇದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ಅನ್ನು ಎದುರಿಸಲು ಕಾರ್ಡಮೋನಿನ್ ಬಹಳ ಪ್ರಯೋಜನಕಾರಿಯಂತೆ. ಕಾರ್ಡಮೋನಿನ್ ನೈಸರ್ಗಿಕ ಸಂಯುಕ್ತವಾಗಿದ್ದು, ಇದು ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದ್ದು,ಇದರ ಅಂಶ ಏಲಕ್ಕಿ ಮತ್ತು ಶುಂಠಿಯಲ್ಲಿ ಕಂಡು ಬರುತ್ತದೆ ಎಂದು ಹೇಳಲಾಗಿದೆ.